*ಅಪ್ರಾಪ್ತೆಯ ಕಿಡ್ನ್ಯಾಪ್: ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಭೀಕರ ಅಪಘಾತ: ಸ್ಥಳದಲ್ಲೇ ಬಾಲಕಿ ಸಾವು*

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಉದ್ದೇಶದಿಂದ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಯ ಹಿಂದೆ ಬಿದ್ದಿಇದ್ದ ಅಜಯ್ ಎಂಬಾತ ತನ್ನ ಸಹಚರರ ಜೊತೆಗೂಡಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಸಂಚು ರೂಪಿಸಿದ್ದ. ಇದೇ ಉದ್ದೇಶಕ್ಕೆ ಬಾಲಕಿಯನ್ನು ಬೈಕ್ ನಲ್ಲಿ ಕರೆದೊಯ್ದಿದ್ದ. ಒಂದು ಬೈಕ್ ನಲ್ಲಿ ಅಜಯ್, ಬಾಲಕಿ ಹಾಗೂ ಅಜಯ್ ಸ್ನೇಹಿತ ಹೋಗುತ್ತಿದ್ದರೆ, ಮತ್ತೊಂದು ಬೈಕ್ ನಲ್ಲಿ ಇನ್ನಿಬ್ಬರು ಇದ್ದರು.
ಈ ವೇಳೆ ಅಜಯ್ ಬೈಕ್ ಡಿವೈಡರ್ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಅಕ್ಟೋಬರ್ 24ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ವಾಪಾಸ್ ಆಗದಿದ್ದಾಗ ಪೋಷಕರು ಕಂಗಾಲಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು. ಅದೇ ದಿನ ಸಂಜೆ ಪೋಷಕರಿಗೆ ಕರೆಯೊಂದು ಬಂದಿದ್ದು ನಿಮ್ಮ ಮಗಳು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.
ಬಲವಂತವಾಗಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗುವ ಯತ್ನ ಆರೋಪದಲ್ಲಿ ಆರೋಪಿ ಅಜಯ್ ಅಲಿಯಾಸ್ ಮನೋಜ್, ಇರ್ಫಾನ್, ಮುಬಾರಕ್, ಓರ್ವ ಅಪ್ರಾಪ್ತ ನನ್ನು ಪೊಲೀಸರು ಬಂಧಿಸಿದ್ದಾರೆ.



