*ಗುಂಡಿಕ್ಕಿ ದಿನೇಶ್ ಬೀಡಿ ಮಾಲಕನನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ*

ಪ್ರಗತಿವಾಹಿನಿ ಸುದ್ದಿ: ದಿನೇಶ್ ಬೀಡಿ ಮತ್ತು 555 ಬೀಡಿ ಎಂಬ ಎರಡು ಪ್ರಸಿದ್ದ ತಂಬಾಕು ಬ್ರಾಂಡ್ಗಳ ಮಾಲೀಕನನ್ನು ಸ್ವಂತ ಮಗನೇ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಮಥುರಾದ ವೃಂದಾವನದಲ್ಲಿ ಹತ್ಯೆ ಮಾಡಲಾಗಿದೆ. ಅಪ್ಪ ಮಗನ ಗಲಾಟೆಯಲ್ಲಿ ಮಗ ಅಪ್ಪನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ಅದೇ ಪಿಸ್ತೂಲ್ ನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೌರಾ ನಗರ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.
ಮೃತರನ್ನು ಸುರೇಶ್ ಚಂದ್ರ ಅಗರ್ವಾಲ್ (75), ಮತ್ತು ಅವರ ಮಗ ನರೇಶ್ ಅಗರ್ವಾಲ್ (50) ಎಂದು ಗುರುತಿಸಲಾಗಿದೆ.
ಸುರೇಶ್ ಚಂದ್ರ ಅವರ ಮಗ ನರೇಶ್ ದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು, ಇದರಿಂದಾಗಿ ರೋಸಿ ಹೋಗಿದ್ದ ಸುರೇಶ್ ಚಂದ್ರ ಅವರು ಮಗನಿಗೆ ಗದರಿಸುತ್ತಿದ್ದರು. ಅದೇ ರೀತಿ ಶುಕ್ರವಾರ ರಾತ್ರಿ. ನರೇಶ್ ಮತ್ತೆ ಮನೆಯಲ್ಲಿ ಕುಡಿಯಲು ಪ್ರಾರಂಭಿಸಿದಾಗ, ಅವರ ತಂದೆ ಅವರನ್ನು ತಡೆದರು. ಈ ವೇಳೆ ಅಪ್ಪ ಮತ್ತು ಮಗನ ನಡುವೆ ಗಲಾಟೆ ಪ್ರಾರಂಭವಾಗಿದೆ. ಈ ವೇಳೆ ಕೋಪದಿಂದ ನರೇಶ್ ತನ್ನ ಪರವಾನಗಿ ಪಡೆದ .32 ಬೋರ್ ಪಿಸ್ತೂಲಿನಿಂದ ತನ್ನ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಈ ಗುಂಡು ಸುರೇಶ್ ಅವರ ಎದೆಗೆ ತಗುಲಿ ತಕ್ಷಣವೇ ಅವರು ಸಾವನಪ್ಪಿದ್ದಾರೆ. ಬಳಿಕ ತಾನು ಮಾಡಿದ್ದನ್ನು ಅರಿತುಕೊಂಡ ನರೇಶ್ ಗಾಬರಿಗೊಂಡು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುಂಡಿನ ಸದ್ದು ಕೇಳಿದ ನಂತರ ಕುಟುಂಬ ಸದಸ್ಯರು ಕೋಣೆಗೆ ಧಾವಿಸಿ ಬಂದಾಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.




