
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಕ್ಕಳ ವಯಕ್ತಿಕ ಭವಿಷ್ಯ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಪಾಲಕರು ಮಕ್ಕಳಿಗೆ ಸಮಯ ನೀಡಬೇಕು. ಮಕ್ಕಳಬೇಕು, ಬೇಡಗಳ ಕುರಿತು ನಿಗವಹಿಸಲೇಬೇಕು ಎಂದು ಖ್ಯಾತ ಮಕ್ಕಳ ತಜ್ಞೆ ಡಾ.ಸುಜಾತಾ ಜಾಲಿ ಕರೆ ನೀಡಿದ್ದಾರೆ.

ಇಲ್ಲಿಯ ಜೈನ್ ಹೆರಿಟೇಜ್ ಶಾಲೆಯ ಫಂಡಮೆಂಟಲ್ ವಿಭಾಗದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಬಿಡುವಿಲ್ಲದ ಕೆಲಸಗಳ ನಡುವೆ ಪಾಲಕರಿಗೆ ಸಮಯವಿಲ್ಲ. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಮಕ್ಕಳಿಗೆ ತಿಳಿಸುವ ಕೆಲಸವೂ ಆಗುತ್ತಿಲ್ಲ. ಮಕ್ಕಳು ಬೆಳೆದ ನಂತರ ಈ ದೇಶಕ್ಕೆ ಅವರ ಕೊಡುಗೆ ಕುರಿತು ಯೋಚಿಸುವುದಿಲ್ಲ, ಮಕ್ಕಳ ಸಾಮರ್ಥ್ಯ ಗುರುತಿಸುವುದಿಲ್ಲ, ಅವರಿಗೆ ಯಾವುದನ್ನು ಕೊಡಬೇಕು, ಯಾವುದನ್ನು ಕೊಡಬಾರದು ಎನ್ನುವುದನ್ನೂ ಯೋಚಿಸುವುದಿಲ್ಲ ಎಂದು ಅವರು ಹೇಳಿದರು.

ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸಲು ನಮ್ಮಲ್ಲಿ ಹಣವಿರಬಹುದು, ಆದರೆ ಕೇಳುತ್ತಾರೆಂದು ಕೊಡಿಸಬಾರದು, ಅವರ ಬೇಕು, ಬೇಡಗಳ ಕುರಿತು ಯೋಚಿಸಬೇಕು. ಇಲ್ಲವಾದಲ್ಲಿ ಅದು ಮುಂದೆ ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು. ಸ್ಕ್ರೀನ್ ಟೈಮ್ ಕೂಡ ನಿಯಂತ್ರಿಸಬೇಕು. ಇಂಟರ್ ನೆಟ್ ಉಪಯೋಗಿಸುವಾಗ ಗಮನಿಸಬೇಕು. ಆದ್ಯಾತ್ಮಿಕ ವಿಷಯಗಳ ಕಡೆಗೆ ಮಕ್ಕಳನ್ನು ಉತ್ತೇಜಿಸಬೇಕು. ಅವರ ಕೆಲಸಗಳನ್ನು ಅವರೇ ಮಾಡುವಂತೆ ಕಲಿಸಬೇಕು. ಸ್ವತಂತ್ರವಾಗಿ ಬದುಕುವುದನ್ನು ಕಲಿಸಬೇಕು. ಇಂದು ನಮಕ್ಕಳಲ್ಲಿ ಮಧುಮೇಹ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಅವರ ಆಹಾರದ ಕಡೆಗೆ ನಿಗಾವಹಿಸಬೇಕು. ಪುಸ್ತಕದ ಜೊತೆಗೆ ದೈಹಿಕ ಚಟುವಟಿಕೆಗೂ ಪ್ರೋತ್ಸಾಹಿಸಬೇಕು ಎಂದು ಸುಜಾತಾ ಜಾಲಿ ಹೇಳಿದರು.

ಪ್ರಾಥಮಿಕ ಶಾಲೆ ವಿಭಾಗದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆಎಸ್ಐಎಸ್ಎಫ್‌ನ ಸಹಾಯಕ ಕಮಾಂಡೆಂಟ್ ಬಾಬು ಚೌಗಲಾ ಆಗಮಿಸಿದ್ದರು. ಮಕ್ಕಳಲ್ಲಿ ಶಿಸ್ತು ಬಹಳ ಮುಖ್ಯ. ಪರಿಶ್ರಮದ ಬದುಕಿನ ಕುರಿತು ಅರಿವು ಮೂಡಿಸಬೇಕು. ಈ ವಯಸ್ಸಿನಲ್ಲೇ ಅವರನ್ನು ತಿದ್ದಿ ಭವಿಷ್ಯ ರೂಪಿಸಬೇಕು ಎಂದು ಅವರು ಹೇಳಿದರು.


ವಿವಿಧ ಸ್ಫರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪದಕಗಳನ್ನುವಿತರಿಸಲಾಯಿತು. ನಿರ್ದೇಶಕಿ ಶ್ರದ್ಧಾ ಖಟವಟೆ, ಆಡಳಿತಾಧಿಕಾರಿ ಆ್ಯಮೀ ದೋಷಿ, ಪ್ರಾಂಶುಪಾಲರಾದ ರೋಹಿಣಿ ಕೆ. ಬಿ. ಉಪಸ್ಥಿತರಿದ್ದರು.




