ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಮಳೆಗಾಲದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಯಡೂರವಾಡಿಗೆ ಬರಲು ಜನರು ಪರದಾಡುತ್ತಿದ್ದರು. ಡೋಣಿ ತೋಟದಲ್ಲಿ ನಬಾರ್ಡ ಯೋಜನೆಯಡಿ 1.40 ಕೋಟಿ ರು. ಗಳಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ತಾಲೂಕಿನ ಯಡೂರವಾಡಿ ಗ್ರಾಮದ ಶಹಪುರ-ಯಡೂರವಾಡಿ ಡೋಣಿ ತೋಟದ ಹತ್ತಿರ ಬ್ರೀಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಬಾರಿ ಕೃಷ್ಣಾ ನದಿಗೆ ಪ್ರವಾಹ ಬಂದು ಡೋಣಿ ತೋಟ ನಡುಗಡ್ಡೆಯಾಗುತ್ತಿತ್ತು. ಅಲ್ಲಿನ ಜನರು ಸಾಕಷ್ಟು ಪರದಾಡುತ್ತಿದ್ದರು. ಈ ಭಾಗದಲ್ಲಿ ಬ್ರೀಜ್ ನಿರ್ಮಾಣ ಮಾಡುವಂತೆ ಹಲವು ದಿನಗಳ ಬೇಡಿಕೆಯಾಗಿತ್ತು. ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸೇತುವೆಯನ್ನು 28 ಪುಟ ಎತ್ತರ ಹಾಗೂ 7 ಪುಟ ಅಗಲದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು 6 ತಿಂಗಳಿನಲ್ಲಿ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಪ್ರವಾಹ ಪೀಡಿತ ಗ್ರಾಮಗಳ ಸಮೀಕ್ಷೆ ಕಾರ್ಯ ಮುಗಿದಿದ್ದರೂ ಇನ್ನೂ ಕೆಲವು ಕಡೆ ಪರಿಹಾರ ಹಣ ನೀಡಿಲ್ಲ. ಯಾವುದೆ ಕುಂಟು ನೆಪ ಹೇಳಿದೆ ಅಧಿಕಾರಿಗಳು ಪರಿಹಾರ ನೀಡುವಂತೆ ತಿಳಿಸಿದರು.
ಇನ್ನು ಕೆಲವು ಗ್ರಾಮಗಳಲ್ಲಿ ತಾಂತ್ರಿಕ ನೆಪವೊಡ್ಡಿ ಪರಿಹಾರ ನೀಡಲು ವಿಳಂಬ ಮಾಡದಂತೆ ಸೂಚನೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಹೆಚ್ಷಿನ ಅನುದಾನ ತಂದು ಚಿಕ್ಕೋಡಿ-ಸದಲಗಾ ಕ್ಷೇತ್ರ ಅಭಿವೃದ್ದಿ ಪಡಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.
ಮುಳಗಡೆ ಪ್ರದೇಶದ ಜನರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕವಾದ ಕಾರ್ಯ ಮಾಡಲಾಗುವುದು. ಪ್ರವಾಹ ಪೀಡಿತ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವದಕ್ಕಾಗಿ ಮಾಂಜರಿ, ಯಡೂರವಾಡಿ, ಚಂದೂರ ಗ್ರಾಮಗಳಿಗೆ 3 ಕೋಟಿ ಹಣ ಮಂಜೂರಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಾಕಷ್ಟು ನೀರಾವರಿ ಯೋಜನೆ ಜಾರಿಗೆ ತಂದು ಅಭಿವೃದ್ದಿ ಮಾಡಲಾಗಿದೆ. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದತ್ತಾತ್ರೇಯ ಮಾನೆ, ಪೋಪಟ ಪಾಟೀಲ, ಗುತ್ತಿಗೆದಾರ ಐ.ಕೆ.ಪಾಟೇಲ, ಡಾ.ರಾಜು ಚವ್ಹಾಣ, ಭೀಮಗೊಂಡ ಪಾಟೀಲ, ಪಾಂಡು ಕೋಳಿ, ಶೀವು ಪೀರಾಜೆ, ಅಪ್ಪು ಪೀರಾಜೆ, ಆರ್.ಪಿ.ಅವತಾಡೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ