Belagavi NewsBelgaum NewsKannada NewsKarnataka News

*ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಪಂಚಭೂತಗಳಲ್ಲಿ ಲೀನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಅಂತಿಮ ದರ್ಶನವನ್ನು ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಪಡೆದರು.‌ ರಾಮದುರ್ಗ ಪಟ್ಟಣದ ಹೊರ ವಲಯದ ತೋಟದಲ್ಲಿ ಲಿಂಗಾಯತ ಸಂಪ್ರದಾಯದಂತೆ ಮಹಾಂತೇಶ್ ಬೀಳಗಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಹಾಂತೇಶ ಬೀಳಗಿ ಅವರ ಚಿತೆಗೆ ಅಣ್ಣ ಸಿದ್ದರಾಮಪ್ಪ ಅವರು ಅಗ್ನಿಸ್ಪರ್ಶ ಮಾಡಿದರು. ಕುಟುಂಬಸ್ಥರ ಆಕ್ರಂದನದ ನಡುವೆ ನಾಲ್ವರ ಅಂತ್ಯಸಂಸ್ಕಾರ ಮಾಡಲಾಯಿತು. ಮಹಾಂತೇಶ ಅವರ ಪಕ್ಕದಲ್ಲಿ ಶಂಕರ ಬೀಳಗಿ, ಈರಣ್ಣಾ ಬೀಳಗಿ, ಈರಣ್ಣಾ ಶಿರಸಂಗಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು.‌ ಈ ವೇಳೆ ಪತ್ನಿ ರೇಖಾ, ಪುತ್ರಿ ಚೈತನ್ಯ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಇದಕ್ಕೂ ಮುನ್ನ ಶಾಸಕ ಅಶೋಕ ಪಟ್ಟಣ, ಜಿ.ಎಸ್.ಪಾಟೀಲ್, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ, ವೈ.ಎಸ್.ಪಾಟೀಲ, ಶಿವಾನಂದ ಕಾಪಶಿ, ವಿಜಯಮಹಾಂತೇಶ, ಸುರೇಶ ಇಟ್ನಾಳ್, ವೈಶಾಲಿ, ರವಿ ಚೆನ್ನಣ್ಣವರ, ಯಶೋಧಾ ವಂಟಗೋಡಿ, ಚನ್ನಬಸವಣ್ಣ ಲಂಗೋಟಿ, ಡಾ.ಭೀಮಾಶಂಕರ ಗುಳೇದ, ಹಣಮಂತರಾಯಪ್ಪ, ರಿಷಂತ್, ಯಶವಂತ ಗುರಿಕಾರ, ಗಂಗಾಧರಸ್ವಾಮಿ, ಗೋವಿಂದರೆಡ್ಡಿ, ಪದ್ಮಾ ಬಸವಂತಪ್ಪ, ಶಶಿಧರ ಕುರೇರ ಸೇರಿದಂತೆ 50ಕ್ಕೂ ಅಧಿಕ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಹಾಜರಿದ್ದು ಅಂತಿಮ ದರ್ಶನ ಪಡೆದರು.

ಮಹಾಂತೇಶ ಬೀಳಗಿ ಅವರ ಅಕಾಲಿಕ ಮರಣಕ್ಕೆ ಅವರ ಬ್ಯಾಚ್​ಮೇಟ್​, ಅವರ ಅಧೀನದಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಕಣ್ಣೀರು ಹಾಕಿದರು‌‌. ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಇದೇ ವೇಳೆ ಪುತ್ರಿ ಚೈತನ್ಯಾಗೆ ನೀನು ಐಎಎಸ್ ಅಧಿಕಾರಿ ಆಗಬೇಕು. ಒಳ್ಳೆಯ ಹೆಸರು ಸಂಪಾದಿಸಬೇಕು. ದಕ್ಷ ಆಡಳಿತದ ಮೂಲಕ ಜನ ಮೆಚ್ಚುಗೆ ಗಳಿಸಬೇಕು. ಆ ಮೂಲಕ ತಂದೆಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಹರಸಿದರು.

Home add -Advt

ಇದೇ ವೇಳೆ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು‌. ನಂತರ ಪಂಚಗಟ್ಟಿಮಠ ಶಾಲಾ‌ ಮೈದಾನದಿಂದ ಹಲಗತ್ತಿ ತೋಟದ ಮನೆವರೆಗೆ ಅಂತಿಮ ಯಾತ್ರೆ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

Related Articles

Back to top button