Belagavi NewsBelgaum NewsKannada NewsKarnataka News

*ಖಾನಾಪುರ ತಹಶಿಲ್ದಾರ ಕುರ್ಚಿಗಾಗಿ  ಇಬ್ಬರು ಅಧಿಕಾರಿಗಳ ಕಚ್ಚಾಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಬುಧವಾರ ಇಬ್ಬರು ತಹಶಿಲ್ದಾರರು ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಒಬ್ಬರು ಸರ್ಕಾರದ ಆದೇಶದ ಪ್ರಕಾರ ತಹಸೀಲ್ದಾರ್ ಹುದ್ದೆಯನ್ನು ನಿಭಾಯಿಸಿದ್ದು, ಮತ್ತೊಬ್ಬರು ನ್ಯಾಯಾಲಯದ ಆದೇಶದಂತೆ ತಹಶಿಲ್ದಾರ ಕುರ್ಚಿಯಲ್ಲಿ ಕುಳಿತಿದ್ದಾರೆ. 

ಸರ್ಕಾರದ ಆದೇಶದ ಪ್ರಕಾರ ಮಂಜುಳಾ ನಾಯಕ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ದುಂಡಪ್ಪ ಕೋಮಾರ ತಮ್ಮ ಅಧಿಕಾರ ಚಲಾಯಿಸಿದ್ದು, ಬುಧವಾರ ಒಂದೇ ದಿನ ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿಭಾಯಿಸಿದ ಘಟನೆ ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ವರದಿಯಾಗಿದೆ.

ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾದ ಆರೋಪದಡಿ ಉಚ್ಛ ನ್ಯಾಯಾಲಯದ ಸೂಚನೆಯಂತೆ ಕಳೆದ ನ.14ರಂದು ಖಾನಾಪುರ ತಹಶಿಲ್ದಾರ್ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ಹಿಂದಿನ ತಹಶಿಲ್ದಾರ್ ದುಂಡಪ್ಪ ಕೋಮಾರ ಅವರು ಸರ್ವೋಚ್ಛ ನ್ಯಾಯಾಲಯದ ಆದೇಶದೊಂದಿಗೆ ಬುಧವಾರ ಪಟ್ಟಣದ ತಹಶಿಲ್ದಾರ್ ಕಚೇರಿಗೆ ಆಗಮಿಸಿದರು. ಕಚೇರಿಯಲ್ಲಿ ಕರ್ತವ್ಯ ನಿರತ ಹಾಲಿ ತಹಸೀಲ್ದಾರ್ ಮಂಜುಳಾ ನಾಯಕ ಅವರಿಗೆ ತಾವು ನ್ಯಾಯಾಲಯದ ಆದೇಶದ ಪ್ರಕಾರ ಬಂದಿದ್ದು, ತಮಗೆ ಕೂಡಲೇ ಅಧಿಕಾರ ಹಸ್ತಾಂತರಿಸುವಂತೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಂಜುಳಾ ನಾಯಕ, ಸರ್ಕಾರದ ಆದೇಶದಂತೆ ತಾವು ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ.  ತಮಗೆ ಸರ್ಕಾರದಿಂದ ಆದೇಶ ಬಂದಾಗ ಕುರ್ಚಿ ಬಿಟ್ಟುಕೊಡುವುದಾಗಿ ದುಂಡಪ್ಪ ಕೋಮಾರ ಅವರಿಗೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದುಂಡಪ್ಪ ಅವರು ಮಧ್ಯಾಹ್ನ ಮಂಜುಳಾ ನಾಯಕ ಊಟದ ಬಿಡುವಿನಲ್ಲಿ ತಮ್ಮ ಕೊಠಡಿಯಿಂದ ನಿರ್ಗಮಿಸಿದ ಬಳಿಕ ತಹಶಿಲ್ದಾರ್ ಕುರ್ಚಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು. ಟೇಬಲ್ ಮೇಲೆ ಇದ್ದ ಕಡತಗಳಿಗೆ ಸಹಿ ಮಾಡಿ ತಮ್ಮ ಸಿಬ್ಬಂದಿಯನ್ನು ಕರೆದು ಅವರಿಗೆ ಸೂಚನೆಗಳನ್ನು ನೀಡಿದರು. 

Home add -Advt

ಇದೇ ವೇಳೆ ಕಚೇರಿಗೆ ಮರಳಿದ ಮಂಜುಳಾ ನಾಯಕ ಮತ್ತು ದುಂಡಪ್ಪ ಅವರ ನಡುವೆ ವಾಗ್ವಾದ ನಡೆಯಿತು. ದುಂಡಪ್ಪ ತಮಗೆ ಕುರ್ಚಿ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಮಂಜುಳಾ ಅವರು ಗ್ರೇಡ್-2 ತಹಶಿಲ್ದಾರರ ಕೊಠಡಿಯಲ್ಲಿ ಕುಳಿತು ತಮ್ಮ ಕರ್ತವ್ಯ ನಿರ್ವಹಿಸಿದರು. ಒಂದೇ ದಿನ ಒಂದೇ ಕಚೇರಿಯಲ್ಲಿ ಇಬ್ಬರು ತಹಶಿಲ್ದಾರರು ಅಧಿಕಾರ ಚಲಾಯಿಸುತ್ತಿರುವ ಕಾರಣ ತಹಶಿಲ್ದಾರ್ ಕಚೇರಿಯ ಸಿಬ್ಬಂದಿ ವಿಚಲಿತರಾದರು.

“ನ್ಯಾಯಾಲಯದ ಆದೇಶದಂತೆ ಸರ್ಕಾರ ನನ್ನನ್ನು ಖಾನಾಪುರ ತಹಶಿಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಿದಾಗ ಹೊಸದಾಗಿ ಕರ್ತವ್ಯ ನಿರ್ವಹಿಸಲು ಬಂದಿದ್ದ ಮಂಜುಳಾ ನಾಯಕ ಅವರಿಗೆ ನಾನು ಮರುಮಾತಾಡದೆ ಅಧಿಕಾರ ಹಸ್ತಾಂತರಿಸಿ ಕಚೇರಿಯಿಂದ ಹೊರ ನಡೆದಿದ್ದೆ. ಈಗ ಸರ್ವೋಚ್ಛ ನ್ಯಾಯಾಲಯ ನನ್ನನ್ನು ಇದೇ ಹುದ್ದೆಗೆ ಮುಂದುವರೆಸಿ ಆದೇಶಿಸಿದ್ದರಿಂದ ಡಿಸಿ ಅವರ ಸೂಚನೆಯಂತೆ ಈಗ ಬಂದು ಅಧಿಕಾರ ಸ್ವೀಕರಿಸಿದ್ದೇನೆ ಎಂದು ದುಂಡಪ್ಪ ಕೋಮಾರ ತಿಳಿಸಿದ್ದಾರೆ.

ನಾನು ಸರ್ಕಾರದ ಆದೇಶದಂತೆ ಕಳೆದ 12 ದಿನಗಳಿಂದ ಖಾನಾಪುರ ತಹಶಿಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದುಂಡಪ್ಪ ಕೋಮಾರ ಅವರು ನನ್ನ ಕಚೇರಿಗೆ ಬಂದು ಬಲವಂತವಾಗಿ ನನ್ನಿಂದ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನನ್ನ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವ ಮೂಲಕ ಅನಗತ್ಯವಾಗಿ ನನ್ನೊಂದಿಗೆ ವಾದ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಿವರವಾದ ಪತ್ರ ಬರೆದಿದ್ದೇನೆ ಎಂದು ಮಂಜುಳಾ ನಾಯಕ ತಿಳಿಸಿದ್ದಾರೆ.‌

Related Articles

Back to top button