*ವಿಕಲಚೇತನರಿಗೆ ಅನುಕಂಪವಲ್ಲ, ಆತ್ಮಸ್ಥೈರ್ಯ ಬೇಕು: ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಕಲಚೇತನರಲ್ಲಿ ಅಗಾಧವಾದ ವಿಶೇಷ ಶಕ್ತಿ ಇದೆ. ಈ ದಿಶೆಯಲ್ಲಿ ಅವರಿಗೆ ಅನುಕಂಪ ಬೇಡ, ಅವಕಾಶಗಳನ್ನು ನೀಡುವುದರ ಮೂಲಕ ಛಲ, ಆತ್ಮಸ್ಥೈರ್ಯ ತುಂಬಬೇಕೆಂದು ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಹೇಳಿದರು.
ಕೇಂದ್ರ ಸರ್ಕಾರದ ವಿಕಲಚೇತನರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ ಪ್ರಾಯೋಜಕತ್ವದ ಅಲಿಮ್ಕೊ ನಿಗಮ ಹಾಗೂ ಬಿಮ್ಸ್ ಸಂಯುಕ್ತವಾಗಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್ ) ಯಲ್ಲಿ ಆಯೋಜಿಸಿದ್ದ ‘ ವಿಶ್ವ ವಿಕಲಚೇತನರ ದಿನ ‘ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಕಲಚೇತನರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ವಿಕಲಚೇತನರಲ್ಲಿ ಧೈರ್ಯ ತುಂಬಿ ಸಹಾಯ ನೀಡುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ತಂದಿದ್ದು, ಸದುಪಯೋಗ ಪಡಿಸಿಕೊಂಡು ಅಸಾಧ್ಯವಾದುದನ್ನು ಸಾಧಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ವಿಕಲಚೇತನರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುಧಾಕರ್ ಆರ್. ಸಿ, ಅಲಿಮ್ಕೊ ಬೆಳಗಾವಿ ವಿಭಾಗದ ಮುಖ್ಯಸ್ಥ ಜನಾರ್ಧನ್ ಇತರರು ವೇದಿಕೆಯಲ್ಲಿದ್ದರು. ಬೆಳಗಾವಿ ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಕಲಚೇತನರಿಗೆ ಅಲಿಮ್ಕೊ ನಿಗಮದಿಂದ ತ್ರಿಚಕ್ರವಾಹನ, ಗಾಲಿಕುರ್ಚಿ, ಶ್ರವಣ ಯಂತ್ರ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು. ಫಲಾನುಭವಿ ವಿಕಲಚೇತನರು ಅಭಿಪ್ರಾಯ ಹಂಚಿಕೊಂಡು ಸಹಾಯಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.


