*ಕೃಷಿ ಪತ್ತಿನ ಬ್ಯಾಂಕ್ ಸದಸ್ಯರ ಸಭೆ ನಡೆಸಿದ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರ ಹಾಗೂ ಸದಸ್ಯರ ಸಭೆ ನಡೆಸಲಾಯಿತು.
ಇಂದು ಬೆಳಗಾವಿ ಧರ್ಮನಾಥ ಭವನದಲ್ಲಿ ಬೆಳಗಾವಿ ತಾಲೂಕಿನ ಎಲ್ಲಾ ಕೃಷಿ ಪತ್ತಿನ ಬ್ಯಾಂಕ್ ಸದಸ್ಯರ ಕುಂದು ಕೊರತೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಸದಸ್ಯರ ಸಮಸ್ಯೆ ಆಲಿಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಸದಸ್ಯರಾದ ರಾಹುಲ್ ಜಾರಕಿಹೊಳಿ, ಚೆನ್ನರಾಜ್ ಹಟ್ಟಿಹೊಳಿ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಭಾಗಿ ಆಗಿದ್ದರು.
ಚನ್ನರಾಜ ಹಟ್ಟಿಹೊಳಿಗೆ ಸನ್ಮಾನ

ಬೆಳಗಾವಿ ಧರ್ಮನಾಥ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಹಾಗೂ ಇತರೆ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದ ಸಭೆಯಲ್ಲಿ ಚನ್ನರಾಜ ಹಟ್ಟಿಹೊಳಿಗೆ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ ಅವರು, ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಂಘಗಳ ನಡುವಿನ ಪರಸ್ಪರ ಸಹಕಾರ, ಪಾರದರ್ಶಕತೆ ಮತ್ತು ಪರಿಣಾಮಕಾರಿ ಆಡಳಿತ ಅಗತ್ಯವಾಗಿದ್ದು, ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಸಂಘಗಳ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ವೇಗಗೊಳಿಸುವುದು ನಮ್ಮ ಸಂಯುಕ್ತ ಗುರಿಯಾಗಿರಬೇಕು ಎಂದು ಈ ಕರೆ ನೀಡಿದರು.
ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ಡಿಸಿಸಿ ಬ್ಯಾಂಕಿನಿಂದ ಬೆಂಗಳೂರಿನ ಅಫೆಕ್ಸ್ ಬ್ಯಾಂಕಿಗೆ ಪ್ರತಿನಿಧಿಯಾಗಿ ಕಳಿಸಬೇಕಾಗುತ್ತದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಾನು ಚರ್ಚೆ ಮಾಡಿ ರಾಹುಲ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿದ್ದೇವೆ. ಅಫೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ನಡುವಿನ ಕೊಂಡಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇನ್ನು ಸರ್ಕಾರ ಅವರದ್ದೆ ಇರುವುದರಿಂದ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಅನುಕೂಲ ಆಗುತ್ತದೆ. ಐದು ವರ್ಷ ರಾಹುಲ್ ಕೆಲಸ ಮಾಡಲಿದ್ದಾರೆ. ಕಳೆದ 15 ವರ್ಷಗಳಿಂದ ಲಕ್ಷ್ಮಣ ಸವದಿ ಅಫೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿದ್ದರು. ನಡುವೆ 15-20 ತಿಂಗಳು ಲಕ್ಷ್ಮಣರಾವ್ ಚಿಂಗಳೆ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಮೊದಲಿನಿಂದಲೂ ಬಹಳಷ್ಟು ವರ್ಷ ಸವದಿ ಅವರೇ ಪ್ರತಿನಿಧಿಯಾಗಿದ್ದರು ಎಂದರು.
ಇನ್ನು ಅಫೆಕ್ಸ್ ಬ್ಯಾಂಕಿನಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸ್ಥಾನ ಕುರುಬ ಸಮುದಾಯಕ್ಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಬಹಳಷ್ಟು ಜನರು ಅಪೇಕ್ಷೆ ಪಟ್ಟಿದ್ದಾರೆ. ಅದರಲ್ಲಿ ಯಾರಿಗೆ ಮಾಡಿದರೆ ಬ್ಯಾಂಕ್ ಮತ್ತು ಸಮಾಜಕ್ಕೆ ಅನುಕೂಲ ಆಗುತ್ತದೆ ಎಂಬುದನ್ನು ನೋಡಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಅಫೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಹುಲ್ ಜಾರಕಿಹೊಳಿ, ನನ್ನ ಆಯ್ಕೆ ಮಾಡಿದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈಗ ಜವಾಬ್ದಾರಿ ಹೆಚ್ಚಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ, ಯೋಜನೆಗಳನ್ನು ತರಬೇಕು ಎನ್ನುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಕಿರಿಯ ವಯಸ್ಸಲ್ಲಿ ಇದೇ ಮೊದಲ ಬಾರಿ ನಾನು ಪ್ರವೇಶ ಮಾಡಿದ್ದೇನೆ. ತಜ್ಞರ ಸಲಹೆ ಪಡೆದುಕೊಂಡು ಮುನ್ನಡೆಯುವೆ ಎಂದರು.




