*ನಾನು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ನಾನು ಹಾಗೂ ಸತೀಶ್ ಜಾರಕಿಹೊಳಿ ಸಹೋದ್ಯೋಗಿಗಳು. ನಿನ್ನೆ ರಾತ್ರಿ ಮದುವೆಯೊಂದರಲ್ಲಿ ನಾನು ಹಾಗೂ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಐಎಡಿಬಿಎ ನೂತನ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ರಾಜ್ಯ ಹಾಗೂ ಪಕ್ಷದ ವಿಚಾರ ಮಾತನಾಡಿದ್ದೇವೆ. ನಮ್ಮನ್ನು ವೈರಿಗಳಂತೆ ಯಾಕೆ ನೋಡುತ್ತೀರಿ ? ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಇರುತ್ತೇವೆ, ರಾತ್ರಿ ಊಟಕ್ಕೆ ಸೇರುತ್ತೇವೆ, ಬೆಳಗ್ಗೆ ತಿಂಡಿಗೆ ಸೇರುತ್ತೇವೆ. ಇವೆಲ್ಲ ಇದ್ದೇ ಇರುತ್ತವೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ತನ ಇದ್ದೇ ಇರುತ್ತದೆ ಎಂದರು.
ಈಗ ನಾನು ಹಾಗೂ ಎಂ.ಬಿ. ಪಾಟೀಲ್ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದ್ದೇವೆ. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಹೇಗೆ ಆಕರ್ಷಿಸಬೇಕು. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಹೇಗೆ ನಮಗೆ ಸ್ಪರ್ಧೆ ನೀಡುತ್ತಿದೆ. ತೆಲಂಗಾಣದಲ್ಲಿ ಸದ್ಯದಲ್ಲೇ ಜಾಗತಿಕ ಸಮಾವೇಶ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ನಾವು ಹೇಗೆ ಸ್ಪರ್ಧೆ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಈ ರೀತಿ ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಮಾಡುವುದು ಸಹಜ ಎಂದರು.



