*ಇಂದೂ ಕೂಡ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ: ಏರ್ ಪೋರ್ಟ್ ಗಳಲ್ಲಿ 5ನೇ ದಿನವೂ ಮುಂದುವರಿದ ಪರದಾಟ*

ಪ್ರಗತಿವಾಹಿನಿ ಸುದ್ದಿ: ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯವಾಗಿದೆ. 1000 ವಿಮಾನಗಳ ಹಾರಾಟ ರದ್ದಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ ಮುಂದುವರೆದಿದೆ.
ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಐದನೇ ದಿನವಾದ ಇಂದು ಕೂಡ ಮುಂದುವರೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ ಏರ್ ಪೋರ್ಟ್, ಹೈದರಾಬಾದ್, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಇಂದು ಕೂಡ ಇಂಡಿಗೋ ವಿಮಾನ ಹಾರಾಟ ರದ್ದಾಗಿದ್ದು, ಹಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.
ಇಂದಿನ ವಿಮಾನ ಹಾರಾಟ ರದ್ದು ಬಗ್ಗೆ ಮೊದಲೇ ಮಾಹಿತಿ ಇಲ್ಲದೇ ವಿಮಾನ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸರ್ಯಾದ ವ್ಯವಸ್ಥೆಗಳಿಲ್ಲದೇ, ಊಟ-ಆಹಾರಗಳಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಇಂಡಿಗೋ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏರ್ ಪೋರ್ಟ್ ಗಳು ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಬಸ್, ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರ ಸ್ಥಿತಿಯಂತೆ ಭಾಸವಾಗುತ್ತಿದೆ.
ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಸಾವಿರ ಮಾರ್ಗಗಳಲ್ಲಿ ಇಂಡಿಗೋ ಸಂಚಾರ ರದ್ದಾಗಿರುವುದಕ್ಕೆ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಕ್ಷಮೆಯಾಚಿಸಿದ್ದಾರೆ. ಡಿಸೆಂಬರ್ 10ರಿಂದ 15ಳಗೆ ಇಂಡಿಗೋ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಭರವಸೆ ನೀಡಿದ್ದಾರೆ.



