*ಗ್ಯಾರಂಟಿ ಯೋಜನೆ ಇಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ: ಸಿಎಲ್ ಪಿ ಸಭೆಯಲ್ಲಿ ಶಾಸಕರ ಬೇಸರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ಯಾರಂಟಿ ಯೋಜನೆಮಾತ್ರ ನಂಬಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ಸಿಎಲ್ ಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಿಎಲ್ಸಿ ಮೀಟಿಂಗ್ ನಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವು ಶಾಸಕರು ಮಾತನಾಡಿರುವ ವಿಚಾರ ಹೊಸ ಚರ್ಚೆಗೆ ಗ್ರಾಸವಾಗಿದೆ.
ಗ್ಯಾರಂಟಿ ಬಿಟ್ಟು ನಮಗೆ ಅಭಿವೃದ್ಧಿ ಯೋಜನೆಗಳನ್ನು ಕೊಡಿ. ಹೆಚ್ಚು ಅನುದಾನ ಬಿಡುಗಡೆ ಮಾಡಿ ಜನರು ಗ್ಯಾರಂಟಿಗಳ ಬಗ್ಗೆ ಶ್ಲಾಘನೆ ಮಾಡಿ ಮಾತಾಡುತ್ತಿಲ್ಲ. ಗ್ಯಾರಂಟಿಯೇ ನಮಗೆ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಶಾಸಕರು ಸಿಎಂ ಹಾಗೂ ಡಿಸಿಎಂ ಮುಂದೆಯೇ ಮಾತಾಡಿದ್ದಾರೆ.
ಕ್ಷೇತ್ರಗಳಲ್ಲಿ ಜನರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಕೇಳುತ್ತಿದ್ದಾರೆ. ಮುಖ್ಯವಾಗಿ ರಸ್ತೆಯ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಸರ್ಕಾರ ನಮ್ಮ ನೆರವಿಗೆ ಬರಬೇಕು ಅನುದಾನ ಬಿಡುಗಡೆ ಮಾಡಬೇಕು. ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಗಮನ ವಹಿಸಬೇಕಾಗಿದೆ ಎಂದು ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.



