*ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಅಂತಾ ಹೈಕಮಾಂಡ್ ಹೇಳಿದೆ: ಮಧು ಬಂಗಾರೆಪ್ಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂಬ ವಿಧಾನಪರಿಷತ್ ಸದಸ್ಯ ಯತೀಂದ್ರ ಹೇಳಿಕೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರೆಪ್ಪ ಪ್ರತಿಕ್ರಿಯಿಸಿದ್ದು, ನಮಗೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಅಂತಾ ಹೈಕಮಾಂಡ್ ಹೇಳಿದೆ. ಆ ಕೆಲಸ ನಾನು ಮಾಡುತ್ತಿದ್ದೇನೆ. ನಾನು ಯತೀಂದ್ರ ಅವರ ವಕ್ತಾರನಲ್ಲ. ಅವರು ಹೇಳಿದ್ದರೆ ಅವರನ್ನೆ ಕೇಳಿ ಎಂದು ಗರಂ ಆದರು.
ಬೆಳಗಾವಿಯಲ್ಲಿ ಇಂದು ಬೆಳಿಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮಗೆ ಬಹುಮತ ಇದೆ. ಐದು ವರ್ಷ ಕೂಡ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ನಾವು ಬದ್ಧ ಇರುತ್ತೇವೆ. ಅದನ್ನು ಬಿಟ್ಟರೆ ಹೆಚ್ಚಿಗೆ ನನಗೆ ಏನೂ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಹೈಕಮಾಂಡ್ ಅಶಕ್ತ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹೈಕಮಾಂಡ್ ಬಲಿಷ್ಠವಾಗಿಯೇ ಇದೆ. ಅಶಕ್ತವಾಗಿದೆ ಎಂಬ ಪ್ರಶ್ನೆ ಬರುವುದಿಲ್ಲ. ಈ ರೀತಿ ಚರ್ಚೆಗಳು ಆದಾಗ ಆ ರೀತಿ ನಿಮಗೆ ಅನಿಸುತ್ತದೆ. ಈ ರೀತಿಯ ಪ್ರಶ್ನೆಗಳಿಂದ ನಮಗೂ ಮುಜುಗರ ಆಗುತ್ತದೆ. ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಸರ್ಕಾರ ಚನ್ನಾಗಿ ನಡೆಯುತ್ತಿದೆ, ಯಾವುದೇ ತೊಂದರೆ ಇಲ್ಲ. ನನ್ನ ಇಲಾಖೆ ಅಂತೂ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಮಧು ಬಂಗಾರೆಪ್ಪ ಸಮರ್ಥಿಸಿಕೊಂಡರು.
ಆಸೀಫ್ ಸೇಠ್ ಊಟಕ್ಕೆ ಕರೆದಿದ್ದರು. ನನಗೆ ಹೋಗಲು ಆಗಲಿಲ್ಲ. ಹಾಗಾಗಿ, ಡಿನ್ನರ್ ಪಾರ್ಟಿ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ ಅಂತಾ ಮಧು ಬಂಗಾರೆಪ್ಪ ಹೇಳಿದರು.
ಮಕ್ಕಳ ಶಾಲಾ ದಾಖಲಾತಿ ಹೆಚ್ಚಿಸಲು ಯುಕೆಜೆ, ಎಲ್ ಕೆಜಿ ಆರಂಭಿಸಬೇಕು. ಆಗ 1ನೇ ತರಗತಿಗೆ ಮಕ್ಕಳು ಬರುತ್ತಾರೆ. ಪ್ರೌಢಶಾಲೆಗಳನ್ನು ಹೆಚ್ಚಿಸಬೇಕು. ನಾವು ಅಧಿಕಾರಕ್ಕೆ ಬಂದ ಮೇಲೆ 174 ಪ್ರೌಢಶಾಲೆ ಆರಂಭಿಸಿದ್ದೇವೆ. ಅದಕ್ಕೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕಿದೆ. ಇನ್ನು 900 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಇದರಿಂದ ಮಕ್ಕಳ ಶಾಲಾ ದಾಖಲಾತಿ ಹೆಚ್ಚಾಗುವ ವಿಶ್ವಾಸವಿದೆ.
ಕರ್ನಾಟಕ ಮ್ಯಾಗ್ನೇಟ್ ಶಾಲೆಗಳಿಂದ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳಿಗೆ ತೊಂದರೆ ಆಗುತ್ತದೆ ಅಂತಾ ಪ್ರತಿಭಟನೆ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದು ಹಳೆಯ ವಿಚಾರ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಮ್ಯಾಗ್ನೇಟ್ ಮತ್ತು ಕೆಪಿಎಸ್ ಶಾಲೆಗಳು ಸರ್ಕಾರದ್ದೆ. ಮ್ಯಾಗ್ನೇಟ್ ಶಾಲೆಗಳ ಜೊತೆಗೆ ಸೇರಿಸುತ್ತೇವೆ ಅಂತಾ ನಾನು ಹೇಳಿದ್ದನಾ..? ನಾನು ಇಲ್ಲವೇ ಸರ್ಕಾರ ಹೇಳಬೇಕು ಆಗ ಒಂದು ಸ್ಪಷ್ಟತೆ ಸಿಗುತ್ತದೆ ಎಂದರು.
ರಾಮನಗರ ವಿಚಾರದಲ್ಲಿ ಯಾರಾದರೂ ಎಸ್.ಡಿ.ಎಂ.ಸಿ. ಅವರು ಇನ್ನು ಒಳ್ಳೆಯ ಶಾಲೆಗೆ ಹೋಗಬೇಕು ಎನ್ನುವುದು ಅವರ ವಿವೇಚನೆಗೆ ಬಿಟ್ಟಿದ್ದು. ಇನ್ನು ಇಂತಹ ನೂರು ಶಾಲೆಗಳನ್ನು ಬೇಕಾದರೂ ತೆರೆಯಲಿ ಎಂದು ಮಧು ಬಂಗಾರೆಪ್ಪ ಸ್ಪಷ್ಪಪಡಿಸಿದರು.


