
ಪ್ರಗತಿವಾಹಿನಿ ಸುದ್ದಿ: ಲಿಂಗಸೂಗೂರು ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ರೂ.94 ಕೋಟಿ ವೆಚ್ಚದಲ್ಲಿ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿಗೆ ಜೆ.ಜೆ.ಎಂ ಯೋಜನೆಯಡಿ ರೂ.33.22 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಚಾಲ್ತಿಯಲಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಶುಕ್ರವಾರದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಮಾನಪ್ಪ ಡಿ ವಜ್ಜಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಲಿಂಗಸೂಗೂರು ಯೋಜನೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಕಾಮಗಾರಿ ಸ್ಥಳವನ್ನು 18-05-2024 ರಂದು ಹಸ್ತಾಂತರಿಸಲಾಗಿದೆ. 24 ತಿಂಗಳ ಕಾಲಾವಧಿ ನಿಗದಿಪಡಿಸಿದ್ದು, 17-05-2026ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು. ಹಟ್ಟಿ ಪಟ್ಟಣ ಪಂಚಾಯಿತಿ ಯೋಜನೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಸ್ಥಳವನ್ನು 07-01-2025 ರಂದು ಹಸ್ತಾಂತರಿಸಲಾಗಿದೆ. ಮುಂಬರುವ ವರ್ಷದ ಆರಂಭದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಮುದಗಲ್ ಪಟ್ಟಣದ ಕುಡಿಯುವ ನೀರು ಸರಬರಾಜು ಉನ್ನತೀಕರಣ ಯೋಜನೆಗೆ ರೂ.34.96 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಶೇ.50 ರಷ್ಟು ಮೊತ್ತ ರೂ.17.48 ಕೋಟಿ ಸರ್ಕಾರದ ಅನುದಾನ ಹಾಗೂ ಶೇ.50 ರಷ್ಟು ಮೊತ್ತ ರೂ.17.48 ಕೋಟಿಗಳನ್ನು ಪುರಸಭೆ ಪರವಾಗಿ ಮಾರುಕಟ್ಟೆ ಸಾಲ ಪಡೆದು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಸರ್ಕಾರದ ಅನುದಾನದ ಪಾಲಿನಲ್ಲಿ ರೂ.6.62 ಕೋಟಿ ವೆಚ್ಚವಾಗಿದ್ದು, ಶೇ.27 ರಷ್ಟು ಕೆಲಸ ಪೂರ್ಣಗೊಂಡಿದೆ.
ಗುತ್ತಿದಾರರು ಕಾಮಗಾರಿ ನಿಲ್ಲಿಸಿದ್ದರಿಂದ ಟೆಂಡರ್ ರದ್ದುಪಡಿಸಿ ಕಾಮಗಾರಿಯನ್ನು ಯಥಾಸ್ಥಿತಿಯಲ್ಲಿ ಮುದಗಲ್ ಪುರಸಭೆಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಮಾರುಕಟ್ಟೆ ಸಾಲ ಲಭ್ಯವಾಗದ ಕಾರಣ ಕಾಮಗಾರಿ ಪ್ರಗತಿ ಕುಂಠಿತವಾಗಿದೆ. ಸಾಲ ಪಡೆಯುವ ಕಾರ್ಯಪ್ರಗತಿಯಲ್ಲಿದ್ದು, ಕೂಡಲೇ ಕಾಮಗಾರಿಯನ್ನು ಪುನರ್ ಆರಂಭಿಸಲಾಗುವುದು. ಸದ್ಯ ಲಿಂಗಸೂಗೂರು, ಹಟ್ಟಿ ಹಾಗೂ ಮುದಗಲ್ ಪಟ್ಟಣಗಳಿಗೆ ಬೋರ್‍ವೆಲ್ ಹಾಗೂ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವ ಬಿ.ಎಸ್.ಸುರೇಶ್ ನೀಡಿದರು.
3 ಪಟ್ಟಣಗಳಲ್ಲಿ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಹತ್ತಿರದಲ್ಲಿಯೇ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ಇದ್ದರೂ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಪ್ರತಿದಿನ ಜನರು ನೀರಿನ ಬವಣೆ ಹೇಳಿಕೊಂಡು ಮನೆಗೆ ಬರುತ್ತಾರೆ. ಸರ್ಕಾರ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಮಾನಪ್ಪ ಡಿ.ವಜ್ಜಲ್ ಕೋರಿದರು.



