*ನನಗೆ ರಾಜಕೀಯ ನಿಶ್ಯಕ್ತಿ ಬರಲು ಸಾಧ್ಯವೇ ಇಲ್ಲ: ಸದನದಲ್ಲಿ ಖಡಕ್ ಆಗಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಇಂದು ಕೊನೇ ದಿನ. ಇಂದು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದದಲ್ಲಿ ಉತ್ತರಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಪ್ರಶ್ನೆಗಳಿಗೆ ಅಂಕಿ-ಅಂಶಗಳ ಸಮೇತ ಉತ್ತರಿಸಿದರು. ಈ ವೇಳೆ ನಿನ್ನೆ ಸ್ವಲ್ಪ ನಿಶ್ಯಕ್ತಿ ಇದ್ದಿದ್ದರಿಂದ ಉತ್ತರಿಸಲು ಆಗಿಲ್ಲ. ಇಂದು ಉತ್ತರ ನೀಡುವುದಾಗಿ ಹೇಳಿದ್ದೆ ಹಾಗಾಗಿ ಇಂದು ಉತ್ತರಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್, ರಾಜಕೀಯವಾಗಿಯೂ ಈಗ ತುಂಬಾ ಶಕ್ತರಾದಂತೆ ಕಾಣುತ್ತಿದ್ದೀರಿ. ಪ್ರತಿ ದಿನ ಡಿನ್ನರ್ ಮೀಟಿಂಗ್ ಗಳು ಆಗಿರುವುದರಿಂದ ರಾಜಕೀಯವಾಗಿಯೂ ಶಕ್ತಿ ಬಂದಂತೆ ಭಾಸವಾಗುತ್ತಿದೆ. ಹಾಗಾಗಿ ಆ ಖುಷಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅಭಿವೃದ್ಧಿ ಘೋಷಿಸಿ ಎಂದು ಕಾಲೆಳೆದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿ ಗೂಡಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜಕೀಯವಾಗಿ ನಾನು ಯಾವತ್ತೂ ಅಶಕ್ತನಾಗಿಲ್ಲ. ಆಗುವುದೂ ಇಲ್ಲ. ಶಾರೀರಿಕವಾಗಿ ಸ್ವಲ್ಪ ನಿಶ್ಯಕ್ತಿ ಆಗುತ್ತು. ಹಾಗಾಗಿ ಉತ್ತರಿಸಲು ಆಗಿಲ್ಲ. ರಾಜಕೀಯ ನಿಶ್ಯಕ್ತಿ ಯಾವತ್ತೂ ಇಲ್ಲ. ರಾಜಕೀಯವನ್ನು ಅಷ್ಟು ತಲೆಕೆಡಿಸಿಕೊಂಡು ಮಾಡುವ ಅವಶ್ಯಕತೆಯೂ ಇಲ್ಲ. ರಾಜಕೀಯ ನಿಶ್ಯಕ್ತಿ ಎಂಬ ಪದ ನನ್ನ ಬಳಿ ಇಲ್ಲ. ಅಂತಹ ಸಂದರ್ಭ ಯಾವತ್ತೂ ಬಂದಿಲ್ಲ, ಮುಂದೆ ಬರುವುದೂ ಇಲ್ಲ. ರಾಜಕೀಯವಾಗಿ ನಾನು ಯಾವತ್ತೂ ಶಕ್ತನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.




