*ಕುರ್ಚಿ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ನಾಯಕರ ಕುರ್ಚಿ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ. ಇದು ನಾವು ಮಾತ್ರವಲ್ಲ ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮ ಆಗುತ್ತಿದೆ ಅಂತ ಕೆಪಿಸಿಸಿ ಉಪಾಧ್ಯಕ್ಷರೇ ಸ್ವತಃ ಪತ್ರ ಬರೆದಿದ್ದಾರೆ. ಯಾವ ಸರಕಾರ ಸ್ಥಿರ ಇರಲ್ಲವೋ ಸಹಜವಾಗಿಯೇ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಹೈ ಇದೆ. ಕಮಾಂಡ್ ಇಲ್ಲವೇ ಇಲ್ಲ ಕಾಂಗ್ರೆಸ್ ನಲ್ಲಿ ಗೊಂದಲ ಇದೆ. ಇದರಲ್ಲಿ ಎರಡು ಮಾತಿಲ್ಲ ಕಾಂಗ್ರೆಸ್ ಹೈಕಮಾಂಡೇ ಎರಡು ಭಾಗ ಆಗಿ ಹೋಗಿದೆ. ರಾಜ್ಯದಲ್ಲಿ ಉಂಟಾಗಿರುವ ಗೊಂದಲದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಪಾತ್ರ ಬಹಳ ದೊಡ್ಡದು ಇದೆ. ಕರ್ನಾಟಕ ಕಾಂಗ್ರೆಸ್ ನಾಯಕರು ಪರಿಣಿತರಿದ್ದಾರೆ. ಆದರೆ ಎಲ್ಲವೂ ಇಲ್ಲಿಂದಲೇ ಹೋಗುವಾಗ ಹೈಕಮಾಂಡ್ ಮಾತು ಯಾಕೆ ಇವರು ಕೇಳುತ್ತಾರೆ ಎಂದು ಪ್ರಶ್ನಿಸಿದರು.
ಘೋಷಿತ ತುರ್ತು ಪರಿಸ್ಥಿತಿ
ದ್ವೇಷ ಭಾಷಣ ವಿರುದ್ಧದ ವಿಧೆಯಕದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಧ್ವೇಷ ಭಾಷಣ ಕಾಯ್ದೆ ಇದೊಂದು ದಮನಕಾರಿ ಕಾನೂನು. ದ್ವೇಷ ಭಾಷಣ ಅಂದರೆ ಏನು ಎನ್ನುವ ವ್ಯಾಖ್ಯಾನ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಯಾರನ್ನು ಯಾವಾಗ ಬೇಕಾದರೂ ಒಳಗೆ ಹಾಕುವ ರೀತಿ ಮಾಡಿದ್ದಾರೆ. ರಾಜ್ಯ ಸರಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಯಾರೂ ಇದನ್ನು ಪ್ರಶ್ನೆ ಮಾಡಬಾರದು ಅಂತ ಈ ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಚೋದನಕಾರಿಯಾಗಿ ಮಾತನಾಡಿದರೆ ಕ್ರಮಕ್ಕೆ ಈಗಾಗಲೇ ಬಿಎನ್ ಎಸ್ ಕಾಯಿದೆಯಲ್ಲಿ ಇದೆ. ಮತ್ತೆ ವಿಶೇಷ ಕಾನೂನು ತರುವ ಅಗತ್ಯ ಏನಿದೆ ? ವಿರೋಧ ಪಕ್ಷಗಳು ಸಣ್ಣ ಪುಟ್ಟ ಮಾತನಾಡಿದರೂ ಒಳಗೆ ಹಾಕಬಹುದು ಅಂತ ಈ ಕಾನೂನು ತರುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲೂ ಹೀಗೆ ಇರಲಿಲ್ಲ. ಇದು ಅಘೋಷಿತ ಅಲ್ಲ ಘೋಷಿತ ಎಮರ್ಜನ್ಸಿ, ನಾನೂ ರಾಜ್ಯಪಾಲರನ್ನು ಭೇಟಿ ಮಾಡುವೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ಸಹ ಮಾಡುತ್ತೇವೆ. ಕಾನೂನು ಯಾರ ಕೈಯಲ್ಲಿ ಇದೆ ಎನ್ನುವುದು ಮುಖ್ಯ. ಧ್ವೇಷ ರಾಜಕಾರಣ ಮಾಡುತ್ತಿರುವವರ ಕೈಯಲ್ಲಿ ಸದ್ಯ ಅಧಿಕಾರ ಇದೆ. ಹಾಗಾಗಿ ಹೊಸ ಕಾನೂನು ಆತಂಕಕಾರಿ ಎನ್ನುತ್ತಿದ್ದೇವೆ ಎಂದು ಹೇಳಿದರು.
ಕ್ರಮಕ್ಕೆ ಆಗ್ರಹ
ಸುದೀಪ್- ದರ್ಶನ್ ನಡುವಿನ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸುದೀಪ್ ಸಿನಿಮಾ ಪೈರಸಿ ಬಗ್ಗೆ ಮಾತನಾಡಿದ್ದರೆ, ಪೈರಸಿ ಬಗ್ಗೆ ಆಂಟಿ ಪೈರಸಿ ಕಾನೂನು ಇದೆ.. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸಿನಿಮಾ ಅಷ್ಟೆ ಅಲ್ಲಾ, ಎಲ್ಲಾ ರಂಗದಲ್ಲೂ ಕೂಡ ಪೈರಸಿ ಇದೆ. ಹಾಗಾಗಿ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಅಮೃತಾಂಜನ್, ವಿಕ್ಸ್ ಹಿಡಿದು ಎಲ್ಲವೂ ಡೂಪ್ಲಿಕೆಟ್ ಆಗುತ್ತಿವೆ. ಹಾಗೇ ಸಿನೇಮಾ ಕೂಡ ಪೈರೆಸಿ ತಡೆಗಟ್ಟಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.



