ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಿನ್ನರಿಂದ ಏನೂ ಆಗದು ಎನ್ನುವ ವಿಶ್ವಾಸದಿಂದ ಈವರೆಗೂ ಮಾತನಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಈಗ ತೀವ್ರ ಆತಂಕ ಮನೆ ಮಾಡಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಕೈಗೆ ಸಿಗದೆ ಒಂದು ವಾರವಾಗುತ್ತಿರುವುದು ಮತ್ತು ಅವರು ನವದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಸಮ್ಮಿಶ್ರ ಸರಕಾರವನ್ನು ನಡುಗಿಸತೊಡಗಿದೆ.
ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ ಜಾರಕಿಹೊಳಿ ಕೈ ಬಿಟ್ಟು ಸಹೋದರ ಸತೀಶ್ ಜಾರಕಿಹೊಳಿ ಸೇರಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಅಸಮಾಧಾನಿತರನ್ನೆಲ್ಲ ಸಮಾಧಾನಪಡಿಸುವ ಕಸರತ್ತು ನಡೆದು, ಅದರಲ್ಲಿ ಯಶಸ್ವಿಯಾಗಿರುವ ವಿಶ್ವಾಸವೂ ಕಾಂಗ್ರೆಸ್ ನಲ್ಲಿತ್ತು. ಭಿನ್ನರ ಮುಂದಾಳತ್ವ ವಹಿಸಿರುವ ರಮೇಶ ಜಾರಕಿಹೊಳಿ ಅವರನ್ಸು ಸಮಾಧಾನಪಡಿಸುವ ಹೊಣೆಯನ್ನು ಸತೀಶ್ ಗೆ ವಹಿಸಲಾಗಿತ್ತು.
ಆದರೆ ರಮೇಶ ಜಾರಕಿಹೊಳಿ ಸತೀಶ್ ಸೇರಿದಂತೆ ಯಾರ ಕೈಗೂ ಸಿಗುತ್ತಿಲ್ಲ. ಹಾಗಾಗಿ ಅವರ ಜೊತೆ ಇರಬಹುದಾದ ಕಾಂಗ್ರೆಸ್ ಶಾಸಕರನ್ನೆಲ್ಲ ಸತೀಶ ಭೇಟಿಯಾಗುತ್ತಿದ್ದಾರೆ. ಅವರೆಲ್ಲ ನಾವು ಪಕ್ಷ ಬಿಡುವುದಿಲ್ಲ, ನಿಮ್ಮೊಂದಿಗೆ ಇದ್ದೇವೆ ಎನ್ನುತ್ತಿದ್ದಾರೆ. ಹಾಗಾಗಿ, ರಮೇಶ್ ಜೊತೆ ಯಾರೂ ಇಲ್ಲ, ಇನ್ನೊಂದೆರಡು ದಿನದಲ್ಲಿ ಅವರು ಬಹಿರಂಗವಾಗಿ ಕಾಣಿಸುತ್ತಾರೆ. ಕಾಂಗ್ರೆಸ್ ನಲ್ಲಿ ಒಂದಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ರಮೇಶ್ ನಡೆಯ ಕುರಿತು ಈಗ ಹೊರಬರುತ್ತಿರುವ ಸುದ್ದಿಗಳಿಂದ ಎರಡೂ ಪಕ್ಷಗಳಲ್ಲಿ ಆತಂಕ ಶುರುವಾಗಿದೆ. ಹಾಗಾಗಿಯೇ ಭಾನುವಾರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಯವರು ನಮ್ಮ ಶಾಸಕರ ಖರೀದಿಗೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ತಲಾ 25-30 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ರಮೇಶ ಜಾರಕಿಹೊಳಿ ನನಗೂ ಕೈಗೆ ಸಿಗುತ್ತಿಲ್ಲ ಎಂದೂ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಈ ಮಾತು ಪರಿಸ್ಥಿತಿ ಎಲ್ಲೋ ಬಿಗಡಾಯಿಸುತ್ತಿದೆ ಎನ್ನುವುದರ ಪ್ರತೀಕದಂತಿದೆ. ಇದಕ್ಕೆ ಪೂರಕವೆನ್ನುವಂತೆ ಸತೀಶ್ ಜಾರಕಿಹೊಳಿ ಕೂಡ ಸಿದ್ದರಾಮಯ್ಯ ಹೇಳಿದ್ದಾರೆಂದರೆ ಸತ್ಯಾಂಶ ಇರಬಹುದು ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಮೇಶ ಜಾರಕಿಹೊಳಿ ಕಾಂಗ್ರೆಸ್ ಗೆ ದ್ರೋಹ ಬಗೆಯುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಮಾತು ನಂಬಿ…
ಇಷ್ಟೆಲ್ಲ ಬೆಳವಣಿಗೆ ನಡೆದರೂ, ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುತ್ತೇನೆ ಎಂದು ಹೇಳಿ ಕಣ್ಮರೆಯಾದ ರಮೇಶ ಜಾರಕಿಹೊಳಿ ಇನ್ನೂ ಕಾಣಿಸಿಕೊಂಡಿಲ್ಲ. 3 ತಿಂಗಳ ಮೊದಲೇ ನಮ್ಮ ಸ್ಟ್ರ್ಯಾಟಜಿ ಸಿದ್ಧವಾಗಿತ್ತು. ಆದರೆ ಮುಖ್ಯಮಂತ್ರಿ ಮಾತು ನಂಬಿ ಮೋಸಹೋದೆ ಎಂದು ತೀವ್ರ ನೊಂದು ರಮೇಶ ಜಾರಕಿಹೊಳಿ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ, ಕಾಂಗ್ರೆಸ್ ವರಿಷ್ಠರ ಜೊತೆ ಮಾತನಾಡುವ ಮನಸ್ಸೂ ಇಲ್ಲ ಎಂದೂ ಅವರು ಹೇಳಿದ್ದಾರೆ.
ಈ ಎಲ್ಲದರ ಮಧ್ಯೆ, ರಮೇಶ್ ಜಾರಕಿಹೊಳಿ ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ಬಿಜೆಪಿ ವರಿಷ್ಠ ಅಮಿತ ಶಹಾ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಸುದ್ದಿ ಈಗ ಮಿತ್ರ ಪಕ್ಷಗಳನ್ನು ಆತಂಕಕ್ಕೀಡು ಮಾಡಿದೆ.
ಜೊತೆಗೆ ಬಿಜೆಪಿ ನಾಯಕ, ರಮೇಶ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಯಾರ ಕೈಗೂ ಸಿಗದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಬಾಲಚಂದ್ರ ಮೂಲಕ ಬಿಜೆಪಿಯೊಂದಿಗೆ ವ್ಯವಹಾರ ಕುದುರಿಸುತ್ತಿರುವ ಸಂಶಯವೂ ಮೂಡಿದೆ.
ಈ ಎಲ್ಲ ವಿದ್ಯಾಮಾನಗಳು ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಅಸಮಾಧಾನಿತರೆಲ್ಲ ಸೇರಿ ಗುಟ್ಟಾಗಿ ಕಾರ್ಯಾಚರಣೆ ನಡೆಸುತ್ತಿರುವ ವಾಸನೆ ಬಡಿಯುತ್ತಿದೆ. ವಿಶೇಷವೆಂದರೆ ಭಿನ್ನರ ಕಾರ್ಯಾಚರಣೆ ಈ ಬಾರಿ ಅತ್ಯಂತ ಗುಪ್ತವಾಗಿ ನಡೆಯುತ್ತಿದ್ದು, ಇಂಟಲಿಜನ್ಸ್ ವಿಭಾಗ ಕೂಡ ಇದನ್ನು ಪತ್ತೆ ಮಾಡಲು ಹೆಣಗಾಡುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ