ಪ್ರಗತಿವಾಹಿನಿ ಸುದ್ದಿ, ಶಿರಸಿ -ಖ್ಯಾತ ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಇಡೀ ಬದುಕನ್ನೇ ಯಕ್ಷಗಾನಕ್ಕಾಗಿ ಮೀಸಲಿಟ್ಟಿದ್ದ ಮಂಜುನಾಥ ಭಾಗವತರು ಕಳೆದ ಸುಮಾರು 15 ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶಿರಸಿ ತಾಲೂಕಿನ ಹನುಮಂತಿ ಬಳಿ ಹೊಸ್ತೋಟ ಅವರ ಮೂಲ ಊರಾದರೂ ವಾನಳ್ಳಿ ಬಳಿ ನೆಲೆಸಿದ್ದರು.
ಯಕ್ಷಗಾನದ ಭಾಗವತಿಕೆಯಲ್ಲಿ ಪ್ರಸಿದ್ಧರಾಗಿದ್ದ ಅವರು ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಸುಮಾರು 300ಕ್ಕೂ ಹೆಚ್ಚು ಯಕ್ಷಗಾನದ ಕೃತಿಗಳನ್ನೂ ಅವರು ರಚಿಸಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಾಗಿ ಯಕ್ಷಗಾನದಲ್ಲಿ ಪಳಗಿದ್ದರು.
ಅಂಧ ಮಕ್ಕಳು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನರಿಗೆ ಯಕ್ಷಗಾನದ ತರಬೇತಿ ನೀಡಿದ್ದರು. ಸ್ವತಃ ಸಾವಿರಾರು ಯಕ್ಷಗಾನಗಳಲ್ಲಿ ಭಾಗವತಿಕೆ ಮಾಡಿದ್ದರು. ಹಲವಾರು ಯಕ್ಷಗಾನ ತರಬೇತಿ ಶಾಲೆಗಳನ್ನು ಸಹ ತೆರೆದಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಕೊಡುವ ಪಾರ್ತಿ ಸುಬ್ಬ ಪ್ರಶಸ್ತಿ, ಜಾನಪತ ಅಕಾಡೆಮಿ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ 25ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ