
ಪ್ರಗತಿವಾಹಿನಿ ಸುದ್ದಿ: ಕೊಲೆ ಅಪರಾಧಿಗಳಿಬ್ಬರು ಜೈಲಿನಲ್ಲೇ ಒಬ್ಬರಿಗೊಬ್ಬರು ಪರಿಚಯವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ಕೈದಿಗಳಿಬ್ಬರು ಮದುವೆಗೆ ಮುಂದಾಗಿರುವ ಅಪರೂಪದ ಪ್ರಸಂಗಕ್ಕೆ ರಾಜಸ್ಥಾನ ಸಾಕ್ಷಿಯಾಗುತ್ತಿದೆ.
ಹೌದು.. ಜೈಲು ಹಕ್ಕಿಗಳಿಬ್ಬರು ಪೆರೋಲ್ ಪಡೆದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಡೇಟಿಂಗ್ ಆ್ಯಪ್ನಲ್ಲಿ ಭೇಟಿಯಾದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಮಹಿಳೆ ಪ್ರಿಯಾ ಸೇರ್ ಅಲಿಯಾಸ್ ನೇಹಾ ಸೇರ್ ಹಾಗೂ ಐದು ಜನರನ್ನು ಕೊಂದ ಆರೋಪ ಹೊತ್ತಿರುವ ಹನುಮಾನ್ ಪ್ರಸಾದ್ ಇಂದು ಅಲ್ವಾರ್ನ ಬರೋಡಮೇವ್ನಲ್ಲಿ ತಮ್ಮ ಮದುವೆಗಾಗಿ ರಾಜಸ್ಥಾನ ಹೈಕೋರ್ಟ್ನಿಂದ 15 ದಿನಗಳ ತುರ್ತು ಪೆರೋಲ್ಗಳನ್ನು ಪಡೆದಿದ್ದಾರೆ.
ಮಾಡೆಲ್ ಆಗಿರುವ ಪ್ರಿಯಾ ಸೇರ್, ಡೇಟಿಂಗ್ ಆ್ಯಪ್ನಲ್ಲಿ ಭೇಟಿಯಾದ ದುಷ್ಯಂತ್ ಶರ್ಮಾ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಅವರು ಸಂಗನೇರ್ ಓಪನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಆಕೆ ಆರು ತಿಂಗಳ ಹಿಂದೆ ಅದೇ ಜೈಲಿನಲ್ಲಿ ಪ್ರಸಾದ್ ನನ್ನು ಭೇಟಿಯಾಗಿ ಇಬ್ಬರೂ ಪ್ರೀತಿಯಲ್ಲಿ ಸಿಲುಕಿದ್ದಾರೆ.
ಇನ್ನು ಆಕೆಯ ಪ್ರಸ್ತುತ ಪ್ರಿಯಕರ ಹನುಮಾನ್ ಪ್ರಸಾದ್ ಬರೋಬ್ಬರಿ 5 ಕೊಲೆಗಳನ್ನು ಮಾಡಿ ಜೈಲಿನಲ್ಲಿದ್ದಾನೆ. ಪ್ರಸಾದ್ ತನಗಿಂತ 10 ವರ್ಷ ದೊಡ್ಡವಳಾದ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಆಕೆ ಸಂತೋಷ್ ಅಲ್ವಾರ್ನಲ್ಲಿ ಟೇಕ್ವಾಂಡೋ ಆಟಗಾರ್ತಿಯಾಗಿದ್ದಳು. 2017ರ ಅಕ್ಟೋಬರ್ 2ರಂದು ಆತ ತನ್ನ ಗೆಳತಿಯ ಪತಿ ಮತ್ತು ನಾಲ್ವರು ಮಕ್ಕಳನ್ನು ಕೊಲೆ ಮಾಡಿ ಜೈಲು ಸೇರಿದ್ದ.

