*ಬಿಜೆಪಿ ವಿರುದ್ಧ ಪ್ರತಿಭಟನೆ: ಲೋಕಭವನ ಮುತ್ತಿಗೆಗೆ ಕಾಂಗ್ರೆಸ್ ಪ್ಲಾನ್*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಮನ್ರೇಗಾ ಯೋಜನೆಯ ಹೆಸರನ್ನು ಬದಲಾವಣೆ ಮಾಡಿರುವ ಜೊತೆಗೆ ಯೋಜನೆಯ ಸ್ವರೂಪವನ್ನೇ ಬದಲಾಯಿಸಿರುವುದನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಹೋರಾಟದಲ್ಲಿ ಭಾಗವಹಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದಾರೆ.
ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಸುರ್ಜೇವಾಲ, ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಪ್ರತಿಭಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಲಿದ್ದು, ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಧರಣಿ ಆರಂಭವಾಗಲಿದೆ. ಬಳಿಕ ಕಾಂಗ್ರೆಸ್ ನಾಯಕರು ಲೋಕಭವನದತ್ತ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲಿದ್ದಾರೆ.
ಈ ಪ್ರತಿಭಟನೆಯಲ್ಲಿ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ನರೇಗಾ ಕಾರ್ಯಕರ್ತರು ಭಾಗವಹಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 5 ಕಿಲೋಮೀಟರ್ ಪಾದಯಾತ್ರೆ ನಡೆಸುವಂತೆ ಸೂಚಿಸಲಾಗಿದೆ.

