
ಪ್ರಗತಿವಾಹಿನಿ ಸುದ್ದಿ: ಉಡುಪಿಯಲ್ಲಿ ಸಂಭವಿಸಿದ್ದ ಟೂರಿಸ್ಟ್ ಬೋಟ್ ದುರಂತ ಪ್ರಕರಣದಲ್ಲಿ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಡುಪಿಯ ಡೆಲ್ಟಾ ಬೀಚ್ ನಿಂದ ಎರಡು ಬೋಟ್ ಗಳ್ಲಲಿ ವಿಹಾರಕ್ಕೆ ತೆರಳಿದ್ದಾಗ ಒಂದು ಬೋಟ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿತ್ತು. ಒಂದು ಬೋಟ್ ನಲ್ಲಿ 14 ಜನರು ಇದ್ದರು. 14 ಜನರೂ ಸಮುದ್ರಪಾಲಾಗಿದ್ದರು. ಮತ್ತೊಂದು ಬೋಟ್ ನಲ್ಲಿದ್ದವರು ತಕ್ಷಣ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಕೆಲವರು ಲೈಫ್ ಜಾಕೇಟ್ ಧರಿಸಿದ್ದರಿಂದ ಬಚಾವ್ ಆಗಿದ್ದರು.
ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಂದು ಮತ್ತೋರ್ವ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೈಸೂರು ಮೂಲದ ದಿಶಾ (23) ಮೃತ ಯುವತಿ. ಅಸ್ವಸ್ಥನಾಗಿರುವ ಧರ್ಮರಾಜ್ ಎಂಬಾತನಿಗೆ ಚಿಕಿತ್ಸೆ ಮುಂದುವರೆದಿದೆ.
ಬೋಟ್ ದುರಂತದ ವೇಳೆ ನಿನ್ನೆ ಶಂಕ್ರಪ್ಪ ಹಾಗೂ ಸಿಂಧು ಎಂಬುವವರು ಮೃತಪಟ್ಟಿದ್ದರು. ಮೈಸೂರಿನ ಬಿಪಿಒ ಕಾಲ್ ಸೆಂಟರ್ ನ ಉದ್ಯೋಗಿಗಳು ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದಾಗ ಡೆಲ್ಟಾ ಬೀಚ್ ನಿಂದ ಎರಡು ಟೂರಿಸ್ಟ್ ಬೋಟ್ ಗಳಲ್ಲಿ 28 ಜನ ಯುವಕ-ಯುವತಿಯರು ಸಮುದ್ರದಲ್ಲಿ ವಿಹಾರಕ್ಕೆ ಹೋಗಿದ್ದರು. ಈ ವೇಳೆ ಒಂದು ಬೋಟ್ ಪಲ್ಟಿಯಾಗಿ ದುರಂತ ಸಂಭವಿಸಿದೆ.



