Kannada NewsKarnataka NewsLatest

*ಸಾರಿಗೆ ಸಂಘಟನೆ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಸಾರಿಗೆ ಸಂಘಟನೆಯ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಕಾರ್ಮಿಕರ ಕಣ್ಮಣಿ ಎಂದೇ ಹೆಸರಾಗಿದ್ದ ಹೆಚ್.ವಿ.ಅನಂತಸುಬ್ಬರಾವ್ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ಹೋರಾಟವನ್ನು ಮಾಡಿದ್ದ ಅನಂತಸುಬ್ಬರಾವ್, ಹೋರಾಟವನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದರು.

ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷರಾಗಿದ್ದರು. ನಾಳೆಯಿಂದ ಸಾರಿಗೆ ನೌಕರರು ಬೆಂಗ್ಳೂರು ಚಲೋ ಮುಷ್ಕರಕ್ಕೆ ಕರೆಕೊಟ್ಟಿದ್ದ ಸದರ್ಭದಲ್ಲೇ ಸಾರಿಗೆ ಮುಖಂಡ ಅನಂತಸುಬ್ಬರಾವ್ ವಿಧಿವಶರಾಗಿದ್ದಾರೆ.

ನಾಳೆ ಮಲ್ಲೇಶ್ವರಂನ ಘಾಟೆ ಭವನದಲ್ಲಿ ಅನಂತಸುಬ್ಬರಾವ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Home add -Advt

ಕಾಮ್ರೇಡ್ ಅನಂತಸುಬ್ಬ ರಾವ್ ಅವರು 1960ರ ದಶಕದಲ್ಲೇ ಕಿರಿಯ ವಯಸ್ಸಿನಲ್ಲಿ ಮಾರ್ಕ್ಸವಾದ ಹಾಗೂ ಕಮ್ಯೂನಿಸ್ಟ್ ಚಿಂತನೆಗಳಿಂದ ಪ್ರೇರಿತರಾಗಿ ಕಾರ್ಮಿಕ ಚಳವಳಿಗೆ ಪ್ರವೇಶಿಸಿದರು. ಎಲ್‌ಐಸಿ ನೌಕರರ ಸಂಘಟನೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದ ಶ್ರೇಷ್ಠ ನಾಯಕನಾಗಿದ್ದರು.
ಅವರು ತಮ್ಮ ಜೀವನಪೂರ್ತಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ದ ನಿಷ್ಠಾವಂತ ನಾಯಕನಾಗಿದ್ದರು. ಸಿಪಿಐ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

ಕರ್ನಾಟಕದಲ್ಲಿ ಎಐಟಿಯುಸಿಯ ದೀರ್ಘಾವಧಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು, ಅವರ ಸಮರ್ಥ ನಾಯಕತ್ವದಲ್ಲಿ ಎಐಟಿಯುಸಿ ಯೋಜನಾ ಕಾರ್ಮಿಕರು, ಸಾರ್ವಜನಿಕ ಸಾರಿಗೆ ಕ್ಷೇತ್ರ ಸೇರಿದಂತೆ ಹೊಸ ಕಾರ್ಮಿಕ ವಲಯಗಳಿಗೆ ವಿಸ್ತರಿಸಿತು. ಐಟಿಸಿ, ಮೈಕೋ-ಬೋಷ್ ಸೇರಿದಂತೆ ಹಲವು ಕೈಗಾರಿಕಾ ಸಂಘಗಳನ್ನು ಅವರು ಮುನ್ನಡೆಸಿದರು.
ಕರ್ನಾಟಕದ ಸಾರ್ವಜನಿಕ ಸಾರಿಗೆ ಕಾರ್ಮಿಕರ ನಡುವೆ ಅವರು 50 ವರ್ಷಕ್ಕಿಂತ ಹೆಚ್ಚು ಕಾಲ ಅಹೋರಾತ್ರಿ ದುಡಿದರು. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘಟನೆಯನ್ನು ನಿರಂತರವಾಗಿ ಮುನ್ನಡೆಸಿದರು. ಸಾರಿಗೆ ಕಾರ್ಮಿಕರ ಹೋರಾಟದ ಮುಖಂಡತ್ವ ವಹಿಸಿದ್ದ ಅವರು ಅನೇಕ ಬಾರಿ ಮುಷ್ಕರ ಚಳವಳಿಗಳ ಸಂದರ್ಭದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದರು. ಕಾರ್ಮಿಕರ ಪರವಾಗಿ ರಾಜೀರಹಿತ ನಿಲುವು ಹೊಂದಿದ್ದ ಅವರು ಸಾರಿಗೆ ಇಲಾಖೆಯೊಂದಿಗೆ ಸಂಘಟನೆಯ ನಡುವೆ ಸೇತುವೆ ನಿರ್ಮಿಸುವಲ್ಲಿಯೂ ಯಶಸ್ವಿಯಾದರು.

ಅವರು ತೀಕ್ಷ್ಣ ಬುದ್ಧಿವಂತಿಕೆ ಮತ್ತು ನೆಲಮಟ್ಟದ ವಾಸ್ತವದ ಅರಿವಿನ ಅಪರೂಪದ ಸಂಯೋಜನೆಯ ಎತ್ತರದ ವ್ಯಕ್ತಿತ್ವದರಾಗಿದ್ದರು.
ಜನವರಿ 2026ರವರೆಗೆ ಅವರು ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾಗಿದ್ದರು. ನಂತರ ಅವರು ಸ್ಥಾನತ್ಯಾಗ ಮಾಡಿದ್ದು, ಅವರ ಸ್ಥಾನದಲ್ಲಿ ಪ್ರೊ. ಬಾಬು ಮ್ಯಾಥ್ಯೂ ಅವರನ್ನು ಆಯ್ಕೆ ಮಾಡಲಾಗಿದೆ.

ಕಾಮ್ರೇಡ್ ಅನಂತಸುಬ್ಬ ರಾವ್ ಅವರ ಅಗಲಿಕೆಯಿಂದ ಕರ್ನಾಟಕದ ಕಾರ್ಮಿಕ ವರ್ಗ ಹಾಗೂ ಎಐಟಿಯುಸಿ ದೊಡ್ಡ ನಷ್ಟವನ್ನು ಅನುಭವಿಸಿದೆ. ಅವರ ಗೌರವ ಮತ್ತು ಸ್ಮರಣಾರ್ಥ ನಾವು ನಮ್ಮ ಕೆಂಪು ನಮನ ಸಲ್ಲಿಸುತ್ತೇವೆ ಎಂದು ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿ
ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ತಿಳಿಸಿದೆ.

ಕಾಂ. ಅನಂತಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಕಚೇರಿ, ಘಾಟೆ ಭವನ, ಜಿಡಿ ಪಾರ್ಕ್ ಬಡಾವಣೆ ವೈಯಾಲಿಕಾವಲ್, ಬೆಂಗಳೂರು 560003 ಇಲ್ಲಿ ಇರಿಸಲಾಗುವುದು.

ಕರ್ನಾಟಕದ ಹಿರಿಯ ಕಾರ್ಮಿಕ ನಾಯಕ ಹಾಗೂ ಎಐಟಿಯುಸಿ ಮಾಜಿ ರಾಜ್ಯ ಅಧ್ಯಕ್ಷರಾಗಿದ್ದ ಕಾಮ್ರೇಡ್ ಎಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ ಎನ್ನುವ ಸುದ್ದಿ ಆಘಾತ ಹಾಗೂ‌ ದುಃಖ ತಂದಿದೆ. ಹಿರಿಯ ನಾಯಕನ ಆಗಲಿಕೆಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ತೀವ್ರ ಕಂಬನಿ ಮಿಡಿದಿದೆ. ಮತ್ತು ಅವರ ಶ್ರೀಮತಿ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೂ ತನ್ನ ಅತೀವ ಸಾಂತ್ವಾನ ವ್ಯಕ್ತಪಡಿಸಿದೆ.

ಭಾರತೀಯ ಜೀವವಿಮಾ ನಿಗಮದ ನೌಕರರಾಗಿ ಕಾರ್ಮಿಕ ಚಳವಳಿಗೆ ಧುಮಿಕಿದ ಅನಂತ ಸುಬ್ಬರಾವ್ ಅವರು ಕಳೆದ ಆರು ದಶಕಗಳಿಂದ ಕರ್ನಾಟಕದ ಎಐಟಿಯುಸಿ ರಾಜ್ಯ ನಾಯಕರಾಗಿ ಹಾಗೂ ವಿಶೇಷವಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿ ಹಾಗೂ‌ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಅನೇಕ ಧೀರೋದತ್ತಾ ಹೋರಾಟಗಳನ್ನು ಮುನ್ನಡೆಸಿದ್ದರು ಮತ್ತು ಕಾರ್ಮಿಕರ ವರ್ಗದ ಬದುಕಿಗೊಂದು ಘನತೆಯನ್ನು ಬದುಕನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಇದರ ಜತೆಗೆ ರಾಜ್ಯದಲ್ಲಿ ಜಂಟಿ ಕಾರ್ಮಿಕ ಚಳವಳಿಯ ನಾಯಕರಾಗಿ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಕೇಂದ್ರ ಸರ್ಕಾರ ಜಾರಿ‌ಮಾಡಿರುವ ಕಾರ್ಮಿಕ ಕೋಡ್ ಗಳ ವಿರುದ್ದ ಐಕ್ಯ ಕಾರ್ಮಿಕ ಚಳವಳಿ ದೇಶವ್ಯಾಪಿ ಮುಷ್ಕರದ ತಯಾರಿ ನಡೆಯುತ್ತಿರುವ ಹೊತ್ತಿನಲ್ಲೇ ಅವರು ಆಗಲಿರುವುದು ಐಕ್ಯ ಚಳವಳಿಗೆ ತುಂಬಾ ನಷ್ಟವಾಗಿದೆ.

ನಾಳೆ ಜನವರಿ 29 ರಂದು ಕರ್ನಾಟಕದ ರಸ್ತೆ ಸಾರಿಗೆ ನೌಕರರು ತಮ್ಮ 38 ತಿಂಗಳ ಬಾಕಿ ವೇತನಕ್ಕಾಗಿ ಜಂಟಿಯಾಗಿ ಸಂಘಟಿಸಿದ್ದ ಚಳವಳಿಯಲ್ಲಿ ಯಶಸ್ವಿಗೆ ಅತ್ಯಂತ ಸಕ್ರಿಯ ಪಾತ್ರವಹಿಸಿದ್ದ ಸಂದರ್ಭದಲ್ಲೇ ಅವರು ಇಂದು ಹೃದಯಾಘಾತದಿಂದ ನಿಧನರಾಗಿರುವುದು ಅತ್ಯಂತ ‌ನೋವಿನ ಸಂಗತಿ. ಹೀಗೆ ತನ್ನ ಕೊನೆ ಉಸಿರಿರುವವರೆಗೂ ಚಳವಳಿಯಲ್ಲಿರುವ ಕಾರ್ಯಕರ್ತರಿಗೆ ಒಬ್ಬ ಮಾದರಿ ನಾಯಕರಾಗಿದ್ದರು.

ತಮ್ಮ 85 ರ ಇಳಿವಯಸ್ಸಿನಲ್ಲೂ ಸದಾ ನಗುಮೊಗದಿಂದಲೇ ಒಬ್ಬ ಚಳವಳಿಯ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ ಹಿರಿಯ ಸಂಗಾತಿ ನಿಧನದಿಂದ ಕರ್ನಾಟಕದ ‌ಕಾರ್ಮಿಕ ಚಳವಳಿ ಬಡವಾಗಿದೆ.
ಹಿರಿಯ ನಾಯಕ ಕಾಮ್ರೇಡ್ ಅನಂತ‌ಸುಬ್ಬರಾವ್ ಆಗಲಿಕೆ ಕಾರ್ಮಿಕ ಚಳವಳಿಗೆ ಅಪಾರ ನಷ್ಟ ಉಂಟು‌ಮಾಡಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ತನ್ನ ತೀವ್ರ ದುಃಖ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ತಿಳಿಸಿದ್ದಾರೆ.

Related Articles

Back to top button