
ಪ್ರಗತಿವಾಹಿನಿ ಸುದ್ದಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ನಾಳೆ ಭಾನುವಾರ ಸತತ 9ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಅತಿ ಹೆಚ್ಚು ಅವಧಿಗೆ ಕೇಂದ್ರ ಹಣಕಾಸು ಸಚಿವರ ಹುದ್ದೆ ನಿರ್ವಹಿಸಿದ ಹೆಗ್ಗಳಿಕೆಗೂ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ.
ನಿರ್ಮಲಾ ಸೀತಾರಾಮನ್ ವಿತ್ತ ಸಚಿವರಾಗಿ ಜನವರಿ 31ಕ್ಕೆ ಆರು ವರ್ಷ ಎಂಟು ತಿಂಗಳು ಕಳಿದಿವೆ. ಭಾನುವಾರ ನಾಳೆ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.
ನಿರ್ಮಲಾ ಸೀತಾರಾಮನ್ 9ನೇಯ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಭಾರತೀಯ ಸಂಸದೀಯ ಇತಿಹಾಸದಲ್ಲಿ ಒಂದು ಹೆಮ್ಮೆಯ ಸಂಗತಿಯಾಗಲಿದೆ ಎಂದು ಪ್ರಧಾನಿ ಮೋದಿ ಬಜೆಟ್ ಅಧಿವೇಶನದ ಆರಂಭದಲ್ಲಿ ಹೇಳಿದ್ದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರುಗೆ 2026-27ರ ಸಾಲಿನ ಬಜೆಟ್ ಸಿದ್ಧ ಪಡಿಸಿಕೊಟ್ಟ ತಂಡದಲ್ಲಿ ಕೆಲವರು ಪ್ರಮುಖರಾಗಿದ್ದಾರೆ. ಬಜೆಟ್ ಸಿದ್ಧತೆ ಆರು ತಿಂಗಳ ಹಿಂದೆಯೇ ನಡೆಯುತ್ತದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳು ವಿವಿಧ ಜವಾಬ್ದಾರಿ ತೆಗೆದುಕೊಂಡು ಬಜೆಟ್ ರೂಪಿಸುತ್ತದೆ. ಬಜೆಟ್ ಸಿದ್ಧತೆಯಲ್ಲಿ ಈ ಬಾರಿ ಪ್ರಮುಖ ಪಾತ್ರ ವಹಿಸಿದವರ ವಿವರ ಇಲ್ಲಿದೆ.
ಅನುರಾಧಾ ಠಾಕೂರ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ. ಈ ಬಾರಿಯ ಬಜೆಟ್ನ ಮುಖ್ಯ ರೂವಾರಿ ಎಂದು ಹೇಳಲಾಗುತ್ತಿದೆ. ಆರ್ಥಿಕ ವ್ಯವಹಾರಗಳ ಇಲಾಖೆಗೆ 2025ರ ಜುಲೈ 1ರಂದು ಕಾರ್ಯದರ್ಶಿಯಾಗಿ ಚುಕ್ಕಾಣಿ ಹಿಡಿದ ಇವರಿಗೆ ಇದು ಮೊದಲ ಬಜೆಟ್ ಅನುಭವ. ಯಾವ್ಯಾವ ಇಲಾಖೆಗೆ ಎಷ್ಟು ಸಂಪನ್ಮೂಲ ನೀಡಬೇಕೆಂದು ನಿರ್ಧರಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
ಅರುಣೀಶ್ ಚಾವ್ಲಾ, ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ. ಸರ್ಕಾರಿ ಸಂಸ್ಥೆಗಳ ಬಂಡವಾಳ ಹಿಂತೆಗೆತ, ಖಾಸಗೀಕರಣದ ಜವಾಬ್ದಾರಿ ಇವರ ಇಲಾಖೆಯದ್ದು.
ಅರವಿಂದ್ ಶ್ರೀವಾಸ್ತವ, ರೆವೆನ್ಯೂ ಸೆಕ್ರೆಟರಿ. ಇವರು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಎರಡರ ಮೇಲ್ವಿಚಾರಣೆ ಮಾಡುತ್ತಾರೆ. ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಬರುವ ಟ್ಯಾಕ್ಸ್ ಪ್ರೊಪೋಸಲ್ಗಳನ್ನು ತಯಾರಿಸಿದವರು ಇವರೇ.
ಕೆ ಮೋಸಸ್ ಚಲಾಯ್, ಸರ್ಕಾರಿ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿ. ಆಯ್ದ ಸರ್ಕಾರಿ ಉದ್ದಿಮೆಗಳ ಬಂಡವಾಳ ವೆಚ್ಚ ಎಷ್ಟಿರುತ್ತೆ ಎಂಬುದನ್ನು ಇವರು ಗಮನಿಸುತ್ತಾರೆ.
ಎಂ ನಾಗರಾಜು, ಹಣಕಾಸು ಸೇವೆಗಳ ಕಾರ್ಯದರ್ಶಿ. ಹಣಕಾಸು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತಾ ಸ್ಕೀಮ್ಗಳನ್ನು ಇವರು ನಿಕಟವಾಗಿ ಗಮನಿಸುತ್ತಾರೆ.
ವಿ ಅನಂತ ನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರ. ಆರ್ಥಿಕ ಸಮೀಕ್ಷೆಯ ರೂವಾರಿ. ಒಟ್ಟಾರೆ ಸ್ಥೂಲ ಆರ್ಥಿಕ ದೃಷ್ಟಿಕೋನವನ್ನು ಇವರು ಬಜೆಟ್ಗೆ ನೀಡುತ್ತಾರೆ. ಆರ್ಥಿಕ ಸ್ಥಿತಿ ಹೇಗಿರುತ್ತದೆ, ಜಾಗತಿಕ ಪರಿಸ್ಥಿತಿ ಹೇಗಿದೆ, ವಿವಿಧ ಸೆಕ್ಟರ್ಗಳ ಆರೋಗ್ಯ ಹೇಗಿದೆ ಎಂಬುದನ್ನು ಇವರು ತಿಳಿಸುತ್ತಾರೆ.
ವುಮ್ಲುನ್ಮಾಂಗ್ ವುವಾಲ್ನಮ್, ಎಕ್ಸ್ಪೆಂಡಿಚರ್ ಸೆಕ್ರೆಟರಿ. ಸರ್ಕಾರ ಮಾಡುವ ವೆಚ್ಚ, ಸಬ್ಸಿಡಿ, ಕೇಂದ್ರ ಸ್ಕೀಮ್ಗಳ ಅನುಷ್ಠಾನ ಇತ್ಯಾದಿಯ ಮೇಲ್ವಿಚಾರಣೆ ಇವರು ಮಾಡುತ್ತಾರೆ. ಬಜೆಟ್ನಲ್ಲಿ ಸರ್ಕಾರದ ವೆಚ್ಚಗಳನ್ನು ಕೂಲಂಕಷವಾಗಿ ಪರಿಶೀಲಿಸಿರುತ್ತಾರೆ.


