*ಕರ್ನಾಟಕಕ್ಕೆ ಈಬಾರಿ ತೆರಿಗೆ ಪಾಲು ಹೆಚ್ಚಿಸಿದ ಕೇಂದ್ರ: ವಿವರಣೆ ನೀಡಿದ ಪ್ರಲ್ಹಾದ್ ಜೋಶಿ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಕರ್ನಾಟಕದ ತೆರಿಗೆ ಪಾಲನ್ನು ಶೇ.4.131ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಶೇ.3.647ರಷ್ಟಿದ್ದ ತೆರಿಗೆ ಪಾಲನ್ನು ಇದೀಗ ಶೇ.4.131ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸಾವಿರಾರು ಕೋಟಿ ತೆರಿಗೆ ಪಾಲು ಸಿಗಲಿದೆ ಎಂದಿರುವ ಸಚಿವರು, ‘ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ’ ಎನ್ನುತ್ತಿರುವ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿದ್ದಾರೆ.
2026-27ರ ಬಜೆಟ್ ಪ್ರಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ₹63,049 ಕೋಟಿ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚೇ ತೆರಿಗೆ ಪಾಲು ರಾಜ್ಯಕ್ಕೆ ದೊರಕಲಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
16ನೇ ಹಣಕಾಸು ಆಯೋಗದ ವರದಿಯು ರಾಜ್ಯಗಳ ತೆರಿಗೆ ಹಂಚಿಕೆಯನ್ನು ಶೇ.41ರಲ್ಲಿಯೇ ಉಳಿಸಿಕೊಂಡಿದೆ. ತೆರಿಗೆ ಹಂಚಿಕೆಗಳಲ್ಲಿ ಬದಲಾವಣೆ ಇಲ್ಲದಿದ್ದರೂ ರಾಜ್ಯಗಳ ತೆರಿಗೆ ಹಂಚಿಕೆ ಪಾಲು ಬದಲಾಗಿದೆ. ಆ ಪ್ರಕಾರ ರಾಜ್ಯಗಳಿಗೆ ಹೆಚ್ಚೇ ತೆರಿಗೆ ಪಾಲು ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


