Kannada NewsKarnataka News

 ಸೇವಾ ನೂನ್ಯತೆ: ವಿದ್ಯಾರ್ಥಿನಿಗೆ1 ಲಕ್ಷ ರೂ ಪರಿಹಾರ ನೀಡಲು ಚನ್ನಮ್ಮ ವಿವಿಗೆ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಪದವಿ ಮುಗಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ಅಂಕಪಟ್ಟಿಯನ್ನು ನೀಡದೇ ರಾಣಿಚೆನ್ನಮ್ಮ ವಿಶ್ವವಿದ್ಯಾಲಯವು ಸೇವಾ ನ್ಯೂನ್ಯತೆ ಎಸಗಿರುವುದರಿಂದ ಪಿರ‍್ಯಾದಿದಾರಳಿಗೆ ಪರಿಹಾರವಾಗಿ 1 ಲಕ್ಷ ರೂ. ಗಳನ್ನು ಹಾಗೂ ಮಾನಸಿಕ ವೇದನೆಗಾಗಿ 1 ಸಾವಿರ ರೂ.  ಗಳನ್ನು ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

ಬಾಗಲಕೋಟೆಯ ಕೌಲಪೇಟ್ ಗ್ರಾಮದವಳಾದ ಗೀತಾ ಈರಪ್ಪ ಇಜಾರ್‌ದಾರ್ ಇವಳು ಬಿ.ಕಾಂ ಪದವಿಯನ್ನು ಪಡೆಯಲು ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯಲ್ಲಿ ಪ್ರವೇಶ ಪಡೆದು ೨೦೧೫ ರಲ್ಲಿ ಪಾಸಾಗಿದ್ದಳು.

ಈ ವಿದ್ಯಾಲಯವು ಬಿ.ಕಾಂ ಪದವಿ ಪಾಸಾದ ಅಂಕಪಟ್ಟಿಗಳನ್ನು ಕೊಟ್ಟಿರಲಿಲ್ಲ, ಇದರಿಂದ ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತು ಯಾವುದೇ ಉದ್ಯೋಗ ಪಡೆಯಲು ಅರ್ಜಿ ಸಲ್ಲಿಸಲು ಅಂಕಪಟ್ಟಿ ಇಲ್ಲದ ಕಾರಣ ತೊಂದರೆ ಉಂಟಾಗಿತ್ತು. ಇದರಿಂದ ಅವಳು ಉದ್ಯೋಗವಕಾಶಗಳಿಂದ ವಂಚಿತಳಾಗಿ ನೊಂದು ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮುಂದೆ ದಿನಾಂಕ ೨೪-೦೪-೨೦೧೮ ರಂದು ದೂರು ನಂ.೯೬೪/೨೦೧೮ ನ್ನು ದಾಖಲಿಸಿದಳು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಅವಳ ದೂರನ್ನು ದಾಖಲಿಸಿಕೊಂಡು ಎದುರುದಾರರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ ಇವರಿಗೆ ನೋಟಿಸ್ ಜಾರಿ ಮಾಡಿತ್ತು.

ಪಿರ‍್ಯಾದಿದಾರಳು ಬಿ.ಕಾಂ ಪದವಿಯನ್ನು ೨೦೧೫ ರಲ್ಲಿಯೇ ಪಾಸಾಗಿದ್ದರು ಸಹಿತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಇದುವರೆಗೂ ಅಂಕಪಟ್ಟಿಯನ್ನು ನಿಗದಿತ ಸಮಯದೊಳಗೆ ವಿದ್ಯಾರ್ಥಿನಿಗೆ ನೀಡದೆ ಸತಾಯಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದನ್ನು ಗಮನಿಸಿ ಎದುರುದಾರರ ಸೇವೆಯಲ್ಲಿ ನ್ಯೂನ್ಯತೆ ಇರುವುದಾಗಿ ಅಭಿಪ್ರಾಯಪಟ್ಟಿತು.

ಪಿರ‍್ಯಾದಿದಾರಳಿಗೆ ಪರಿಹಾರವಾಗಿ ರೂ. ೧,೦೦,೦೦೦ ಗಳನ್ನು ಅಲ್ಲದೇ ಮಾನಸಿಕ ವೇದನೆಗಾಗಿ ರೂ.೧೦೦೦ ಗಳನ್ನು ೩೦ ದಿನಗಳೊಳಗೆ ಕೊಡುವಂತೆ ಆದೇಶ ಜಾರಿ ಮಾಡಿದೆ. ತಪ್ಪಿದ್ದಲ್ಲಿ ಸದರಿ ಪರಿಹಾರ ಮೊತ್ತವನ್ನು ಶೇ. ೯ ರಂತೆ ಬಡ್ಡಿಯನ್ನು ಸೇರಿಸಿ ಕೊಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಬಿ.ವಿ.ಗುದ್ಲಿ ಹಾಗೂ ಸದಸ್ಯರಾದ ಸುನಿತಾ ಅವರು ಆದೇಶ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button