Belagavi NewsBelgaum NewsKannada NewsKarnataka NewsLatest

*ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚನೆಯಾಗಬೇಕಿದೆ: ಚನ್ನರಾಜ ಹಟ್ಟಿಹೊಳಿ* *ವೀರ ರಾಣಿ ಬೆಳವಡಿ ಮಲ್ಲಮ್ಮ ಉತ್ಸವ-2026*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೀರ ರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಶೌರ್ಯ ಮತ್ತು ಸಾಹಸದ ಸಂಕೇತವಾಗಿದೆ. ದೇಶದ ಮೊದಲ ಮಹಿಳಾ ಸೈನ್ಯ ಕಟ್ಟಿದ ಕೀರ್ತಿ ಮಲ್ಲಮ್ಮನಿಗೆ ಸಲ್ಲುತ್ತದೆ. ಸಿನಿಮಾ ನಟ ನಟಿಯರನ್ನು ಮಾತ್ರ ಪ್ರೇರಣೆಯಾಗಿ ನೋಡದೇ ಬೆಳವಡಿ ಮಲ್ಲಮ್ಮರ ದಿಟ್ಟತನದ ಪ್ರರಣೆ ಪಡೆದುಕೊಡು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆಗೈದು ತಮ್ಮ ಛಾಪು ಮೂಡಿಸಬೇಕು ಎಂದು ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಾಂಕ ಜಾರಕಿಹೊಳಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ (ಫೆ.28) ಬೆಳವಡಿಯಲ್ಲಿ ನಡೆದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಕೆಲವೆಡೆ ಮಹಿಳೆಯರಿಗೆ ಶೋಷಣೆ ನಡೆಯುತ್ತಿರುವುದು ಕಂಡು ಬರುತ್ತಿವೆ. ಮಹಿಳಾ ಸಮಾನತೆ ಸಮಾಜ ನಿರ್ಮಾಣವಾಗಬೇಕು. ವೈದ್ಯಕೀಯ, ರಾಜಕೀಯ, ಶಿಕ್ಷಣಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು.

Home add -Advt

ಸುಮಾರು 300 ವರ್ಷಗಳ ಹಿಂದೆಯೇ ತಮ್ಮ ಶೌರ್ಯದ ಮೂಲಕ ಮಹಿಳೆಯರ ಪರಾಕ್ರಮದ ಬಗ್ಗೆ ಜಗತ್ತಿಗೆ ಬೆಳವಡಿ ಮಲ್ಲಮ್ಮ ಸಂದೇಶ ನೀಡಿದ್ದಾರೆ. ಅಂದಿನ ಕಾಲಘಟ್ಟದಲ್ಲಿ ಶೌರ್ಯಕ್ಕೆ ಲಿಂಗಬೇಧವಿಲ್ಲ ಎಂಬುದನ್ನು ಬೆಳವಡಿ  

ಮಲ್ಲಮ್ಮ ತೋರಿಸಿಕೊಟ್ಟಿದ್ದಾರೆ ಎಂದು ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಾಂಕ ಜಾರಕಿಹೊಳಿ ತಿಳಿಸಿದರು.

“ಇತಿಹಾಸ ಬಲ್ಲವನು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ” ಎಂಬ ಮಾತಿನಂತೆ ರಾಣಿ ಮಲ್ಲಮ್ಮನ ಇತಿಹಾಸ ಪ್ರತಿಯೊಬ್ಬರು ಅರಿಯಬೇಕಿದೆ. ಬೆಳವಡಿ ಮಲ್ಲಮ್ಮರ ಪ್ರಾಧಿಕಾರ ರಚನೆ ಮಾಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಭರವಸೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಆಚರಣೆ ಮಾಡುವ ಮೂಲಕ ಅವರ ತ್ಯಾಗ, ಬಲಿದಾನವನ್ನು ಯುವ ಪೀಳಿಗೆಗೆ ತಿಳಿಸಲಾಗುತ್ತಿದೆ. ಬೆಳವಡಿ ಮಲ್ಲಮ್ಮ ಕುರಿತು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಶೋಧನೆ ಕಾರ್ಯ ಕೈಗೊಳ್ಳಬೇಕು. ಈ ಭಾಗದ ಬೇಡಿಕೆಯಂತೆ ರಾಣಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚನೆಯಾಗಬೇಕಿದೆ ಎಂದು ಹೇಳಿದರು.

ಈ ನೆಲ ವೀರ, ಶೌರ್ಯದ ಭೂಮಿ, ರಾಣಿ ಚನ್ನಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಹನೀಯರು ಈ ನೆಲದಲ್ಲಿ ಜನಿಸಿದ್ದಾರೆ. ಶಕ್ತಿ, ಗೃಹ ಲಕ್ಷ್ಮೀ ಸೇರಿಯಂತೆ ಅನೇಕ ಮಹಿಳೆಯರ ಪರ ಯೋಜನೆಗಳನ್ನು ಜಾರಿರುವ ಮೂಲಕ ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ಹೂಲಿ ಹಿರೇಮಠ ಬೆಳವಡಿ ಸಂಸ್ಥಾನದ ರಾಜಗುರುಗಳಾದ ಶ್ರೀ ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಯೋಗಸಿಂಹಾಸನಾಧೀಶ್ವರ ಜಗದ್ಗುರು ವಚನಾನಂದ ಮಹಾಸ್ವಾಮಿಗಳು, ಕೂಡಲಸಂಗಮ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಪ್ರಶಸ್ತಿ ಪ್ರದಾನ; ಪುಸ್ತಕ ಬಿಡುಗಡೆ: 

ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸವಿತಾ ಆರ್. ಪಾಟೀಲ (ಬೂದಿಹಾಳ) ಇವರಿಗೆ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಯ. ರು ಪಾಟೀಲ ಅವರು ರಚಿಸಿದ “ವೀರ ಕನ್ನಡತಿ ಬೆಳವಡಿ ಮಲ್ಲಮ್ಮ” ಪುಸ್ತಕ ಮತ್ತು ವೀರರಾಣಿ ಬೆಳವಡಿ ಮಲ್ಲಮ್ಮ ಸಾಕ್ಷ್ಯಚಿತ್ರ, ಯಾಸಿನ್ ಕಿತ್ತೂರು ರಚಿಸಿದ ರಾಣಿ ಬೆಳವಡಿ ಮಲ್ಲಮ್ಮ ಚರಿತ್ರೆಯಿರುವ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. 

ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಭಾನುಪ್ರಕಾಶ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರವೀಣ ಜೈನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಉಪ ಅಧೀಕ್ಷಕ ವೀರಯ್ಯ ಹಿರೇಮಠ, ಬೈಲಹೊಂಗಲ ತಹಶೀಲ್ದಾರ್ ಹನುಮಂತ ಶಿರಹಟ್ಟಿ ಉಪಸ್ಥಿತರಿದ್ದರು. ಬೈಲಹೊಂಗಲ, ಬೆಳವಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles

Back to top button