*ರಾಜ್ಯಸಭಾ ಚುನಾವಣೆ: ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಆಯ್ಕೆಯಾಗಲಿರುವ ಏಳು ಸ್ಥಾನಗಳಿಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಮಹಾರಾಷ್ಟ್ರದಿಂದ ಈ ಬಾರಿ ನಿವೃತ್ತಿಯಾಗುತ್ತಿರುವ ಪ್ರಮುಖ ರಾಜ್ಯಸಭಾ ಸದಸ್ಯರಲ್ಲಿ ಶರದ್ ಪವಾರ್, ರಾಮದಾಸ್ ಅಠವಳೆ, ಫೌಜಿಯಾ ಖಾನ್, ರಜನಿ ಪಾಟೀಲ್, ಪ್ರಿಯಾಂಕಾ ಚತುರ್ವೇದಿ, ಧೈರ್ಯಶೀಲ್ ಪಾಟೀಲ್ ಹಾಗೂ ಭಾಗವತ್ ಕರಡ್ ಸೇರಿದ್ದಾರೆ.
ಹಾಗಾಗಿ ಪ್ರಸ್ತುತ ನಡೆಯುವ ಚುನಾವಣೆಗೆ ರಾಮದಾಸ್ ಅಠವಳೆ, ವಿನೋದ್ ತಾವಡೆ, ಮಾಯಾ ಚಿಂತಾಮನ್ ಇಟ್ನಾಟೆ ಹಾಗೂ ರಾಮರಾವ್ ವಾಚ್ಯುಟೆ ಅವರನ್ನು ಕಣಕ್ಕಿಳಿಸಿದೆ.
ಮಹಾರಾಷ್ಟ್ರದಲ್ಲಿ ಪ್ರಸ್ತುತ ವಿಧಾನಸಭಾ ಬಲದ ಲೆಕ್ಕಾಚಾರ ಪ್ರಕಾರ ಬಿಜೆಪಿ ಕನಿಷ್ಠ ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಿಸುವ ಸ್ಥಿತಿಯಲ್ಲಿ ಇರುವುದರಿಂದ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.
ಮಾರ್ಚ್ 5 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಇದ್ದು, ಮಾರ್ಚ್ 6 ರಂದು ಅರ್ಜಿಗಳ ಪರಿಶೀಲನೆ ನಡೆಯಲಿದೆ. ಮಾರ್ಚ್ 9ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಲಿದೆ. ಮಾರ್ಚ್ 16ರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದು ಸಂಜೆ 5 ನಂತರ ಎಣಿಕೆ ಆರಂಭವಾಗಿ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.



