ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಕೊಡಗಿನ ಬೆಡಗಿ, ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. 3 ವಾಹನಗಳಲ್ಲಿ ಬಂದ 10 ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.

ರಶ್ಮಿಕಾ ಮಂದಣ್ಣ 2016ರಲ್ಲಿ ಕನ್ನಡದ ’ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. 2018ರಲ್ಲಿ ’ಚಲೋ’ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶ ಮಾಡಿದ್ದ ರಶ್ಮಿಕಾ ಇದೀಗ ’ಸುಲ್ತಾನ್’ ಚಿತ್ರಾದ ಮೂಲಕ ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.

ತೆಲುಗಿನಲ್ಲಿ ವಿಜಯ್ ದೇವರಕೊಂಡ ಅಭಿನಯದ ’ಗೋತ ಗೋವಿಂದಂ’,”ಡೀಯರ್ ಕಾಮ್ರೆಡ್’, ದೇವದಾಸ್ ಹಾಗೂ ಇದೀಗ ಬಿಡುಗಡೆಯಾಗಿರುವ ಮಹೇಶ್ ಬಾಬು ಅಭಿನಯದ ’ಸಿರಿಲೇರು ನಿಕೆವ್ವರು’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು ಏಕಕಾಲದಲ್ಲಿ ಕನ್ನಡದಲ್ಲಿ ಧ್ರುವ ಸರ್ಜಾ ಅಭಿನಯದ ’ಪೊಗರು’, ತಮಿಳಿನಲ್ಲಿ ’ಸುಲ್ತಾನ್’ ಹಾಗೂ ತೆಲುಗಿನಲ್ಲಿ ’ಭೀಷ್ಮ’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿನ ಭರ್ಜರಿ ಯಶಸ್ಸು, ಸಾಲು ಸಾಲು ಸಿನಿಮಾಗಳಲ್ಲಿ ಬಿಡುವಿಲ್ಲದ ಅವಕಾಶಗಳ ಹಿಂದೆಯೇ ರಶ್ಮಿಕಾ ಅವರ ಸಂಭಾವನೆ ಕೂಡ ಹೆಚ್ಚಿದ್ದು, ಇಡೀ ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಅಲ್ಲದೇ ರಶ್ಮಿಕಾ ತೆಲುಗಿನಾಲ್ಲಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಈ ಎಲ್ಲಾಅ ಕಾರಣಗಲೂ ಕೂಡ ಐಟಿ ದಾಳಿಗೆ ಕಾರಣವಾಗಿರಬಹುದು ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button