*ಕನ್ನಡ ಖ್ಯಾತ ಸಾಹಿತಿಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ “ದಡ ಸೇರಿಸು ತಂದೆ” ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಆಯ್ಕೆ ಸಮಿತಿಯಲ್ಲಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 2025ರ ಜನವರಿ 30ರಂದು ಆರಂಭವಾದ ಆಯ್ಕೆ ಪ್ರಕ್ರಿಯೆಯ ಬಳಿಕ ಈ ಪ್ರಶಸ್ತಿ ಘೋಷಿಸಲಾಗಿದೆ.
ದಡ ಸೇರಿಸು ತಂದೆ ಅಮರೇಶ ನುಗಡೋಣಿ ಅವರ ಆರನೇ ಕಥಾ ಸಂಕಲನವಾಗಿದ್ದು, ಇದರಲ್ಲಿ ಒಟ್ಟು 8 ಕಥೆಗಳು ಸೇರಿವೆ. ಈ ಕಥೆಗಳು ಇಂದಿನ ಗ್ರಾಮೀಣ ಭಾರತದ ಹಲವು ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಆಳವಾಗಿ ಸ್ಪರ್ಶಿಸುತ್ತವೆ.
ವಿಶೇಷವಾಗಿ ಹಳ್ಳಿಗಳಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆಗಳು ಗುಂಪು ಹಿಂಸಾಚಾರ ಮತ್ತು ಸಾಮಾಜಿಕ ಒತ್ತಡಗಳ ಕ್ರೌರ್ಯವನ್ನು ಕೃತಿಯಲ್ಲಿ ನೈಜವಾಗಿ ಚಿತ್ರಿಸಲಾಗಿದೆ. ಸಮಕಾಲೀನ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳು, ಮಾನವ ಸಂಬಂಧಗಳ ಸಂಕೀರ್ಣತೆ ಮತ್ತು ಗ್ರಾಮೀಣ ಬದುಕಿನ ವೈವಿಧ್ಯತೆಯನ್ನು ಲೇಖಕರು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.
ಈ ಕಥಾ ಸಂಕಲನವನ್ನು 2020ರ ಜನವರಿ 19ರಂದು ರಾಯಚೂರು ನಗರದಲ್ಲಿ ಬಿಡುಗಡೆ ಮಾಡಲಾಗಿತ್ತು. ಪುಸ್ತಕವನ್ನು ಪಲ್ಲವ ಪ್ರಕಾಶನ ಪ್ರಕಟಿಸಿದೆ. ಕನ್ನಡ ಕಥಾಸಾಹಿತ್ಯಕ್ಕೆ ಹೊಸ ಆಯಾಮ ನೀಡಿರುವ ಈ ಕೃತಿ ಇದೀಗ ರಾಷ್ಟ್ರಮಟ್ಟದ ಮಾನ್ಯತೆ ಪಡೆಯುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿ ಗುರುತಿಸಿಕೊಂಡಿದೆ.



