*ಜಲ ಮಂಡಳಿಯಿಂದ ಭರ್ಜರಿ ಗಿಫ್ಟ್: ನೀರಿನ ಬಿಲ್ ಬಾಕಿ ಉಳಿಸಿಕೊಂದವರ ಬಡ್ಡಿ ಮನ್ನಾ*

ಪ್ರಗತಿವಾಹಿನಿ ಸುದ್ದಿ: ನಾಗರಿಕರಿಗೆ ಬೆಂಗಳೂರು ಜಲಮಂಡಳಿ ಭರ್ಜರಿ ಆಫರ್ ಪ್ರಕಟಿಸಿದೆ. ಏಪ್ರಿಲ್ನಿಂದ ಜೂನ್ ತಿಂಗಳ ಒಳಗೆ ಮೂರು ತಿಂಗಳ ಅವಧಿಯಲ್ಲಿ ಬಾಕಿ ಉಳಿಸಿಕೊಂಡ ನೀರಿನ ಬಿಲ್ ಅಸಲು ಪಾವತಿಸಿದರೆ, ಅದರ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲವಾಗಲು ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯನ್ನು ಬರುವ ಏಪ್ರಿಲ್ ತಿಂಗಳಿನಿಂದ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಕುಡಿಯುವ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ತಿಂಗಳ ಅಂತ್ಯದವರೆಗಿನ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ 851.33 ಕೋಟಿ ರೂ.ಗಳಾಗಿವೆ. ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ರೂ. ಹಾಗೂ ಬಡ್ಡಿ 311.90 ಕೋಟಿ ರೂ.ಸೇರಿದೆ. ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡ ಜನರಿಗೆ ಅನುಕೂಲ ಮಾಡಿಕೊಡಲು ಬಿಲ್ ಅಸಲು ಪಾವತಿಸಿದಲ್ಲಿ ‘ಒಟಿಎಸ್’ ಯೋಜನೆಯಡಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಿಡಬ್ಲ್ಯೂಎಸ್ಎಸ್ಬಿ ಏಪ್ರಿಲ್ನಿಂದ ಜಾರಿಗೆ ತರಲಿರುವ ಒಟಿಎಸ್ ಯೋಜನೆಯ ಪ್ರಕಾರ, ನೀರಿನ ಬಿಲ್ ಮೆಲಿನ ಶೇ.100ರಷ್ಟು ಬಡ್ಡಿ ಮನ್ನಾ ಮಾಡಲಾಗುತ್ತದೆ. 3 ತಿಂಗಳು ಜಾರಿಯಲ್ಲಿರುವ ಯೋಜನೆ ಅವಧಿಯಲ್ಲಿ ಗ್ರಾಹಕರು ತಮ್ಮ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದರೆ, ಏಪ್ರಿಲ್ 2026ರವರೆಗೆ ಸಂಗ್ರಹವಾಗಿರುವ ಸಂಪೂರ್ಣ ಬಡ್ಡಿಯನ್ನು ರಿಬೇಟ್ ರೂಪದಲ್ಲಿ ಮನ್ನಾ ಮಾಡಲಾಗುತ್ತದೆ.
ಈ ಯೋಜನೆಯು ಗೃಹ, ವಾಣಿಜ್ಯ , ಕೈಗಾರಿಕಾ ಸೇರಿದಂತೆ ಜಲಮಂಡಳಿಯ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ಬಡ್ಡಿ ಮನ್ನಾ ಯೋಜನೆಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಗ್ರಾಹಕರಿಗೆ ಮಾಹಿತಿ ಒದಗಿಸುವ ಹಾಗೂ ಪಾವತಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ, ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ ಪ್ರತಿ ಬಾಕಿದಾರರಿಗೆ ಅವರ ಆರ್ಆರ್ ಸಂಖ್ಯೆ, ಅಸಲು ಮೊತ್ತ, ಮನ್ನಾ ಆಗುವ ಬಡ್ಡಿ ಮೊತ್ತ ಹಾಗೂ ಪಾವತಿಸಬೇಕಾದ ಅಂತಿಮ ಮೊತ್ತದ ವಿವರಗಳನ್ನು ಒದಗಿಸಲಾಗುವುದು. ಗ್ರಾಹಕರು ಬಿಡಬ್ಲ್ಯೂಎಸ್ಎಸ್ಬಿ ಕಿಯೋಸ್ಕ್, ಆನ್ಲೈನ್ ಪೋರ್ಟಲ್ ಹಾಗೂ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಸುಲಭವಾಗಿ ಹಣ ಪಾವತಿಸಬಹುದು.
ಬೆಂಗಳೂರು ಮಹಾನಗರದ 5.11 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಹಾಗೂ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ದ್ವಿಮುಖ ಉದ್ದೇಶದಿಂದ ಈ ಯುಗಾದಿ ಕೊಡುಗೆಯನ್ನು ಜಾರಿಗೊಳಿಸಲಾಗುತ್ತಿದೆ. ಬರೋಬ್ಬರಿ 311 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡುವ ಮೂಲಕ ನಾಗರಿಕರ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ಇಳಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


