
ಡಾ. ವೀಣಾ ಶಾಂತೇಶ್ವರ, ಸಿ. ಚನ್ನಬಸವಣ್ಣಗೆ ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ: ಧಾರವಾಡ : ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ, ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ. ಚನ್ನಬಸವಣ್ಣಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ತಲಾ 25,೦೦೦ ರೂ. ನಗದು, ಸ್ಮರಣಿಕೆ ಹೊಂದಿದೆ. ಎಂ.ಎ. ವಿದ್ಯಾರ್ಥಿನಿ ರಾಜೇಶ್ವರಿ ಹುಲಮನಿಗೆ 5೦೦೦ ರೂ. ನಗದು ಹೊಂದಿರುವ ವಿದ್ಯಾರ್ಥಿ ಬಹುಮಾನ ನೀಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ಗುರುಲಿಂಗ ಕಾಪಸೆ ಅವರು ಸಂತರು. ಅವರ ಜೀವನ, ಸಾಧನೆ ನಮಗೆ ಪ್ರೇರಣೆ. ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಹಂತಕ್ಕೇರಿದ್ದು ಮಹತ್ಸಾಧನೆ ಎಂದರು.
ಸ್ತ್ರೀ ಶೋಷಣೆ ವಿರುದ್ಧ ಡಾ. ವೀಣಾ ಅವರು ಬರೆದ ಪುಸ್ತಕಗಳು ನನ್ನ ಮೇಲೆ ಪ್ರಭಾವ ಬೀರಿದ್ದರಿಂದ ದೇವದಾಸಿಯರ ಶ್ರೇಯೋಭಿವೃದ್ಧಿಗೆ ಕಾರ್ಯೋನ್ಮುಖನಾದೆ. ಚನ್ನಬಸವಣ್ಣ ಕೇವಲ ಪ್ರಕಾಶರಷ್ಟೇ ಅಲ್ಲ, ಅವರು ಹಲವು ಸಂಘ-ಸoಸ್ಥೆಗಳಿಗೆ ಆಶ್ರಯ ನೀಡಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಪರ ಮಾತನಾಡಿದ ಸಾಮಾಜಿಕ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, ಡಾ. ವೀಣಾ ಶಾಂತೇಶ್ವರ ಹಾಗೂ ಸಿ. ಚನ್ನಬಸವಣ್ಣ ವ್ಯಕ್ತಿತ್ವದ ಮಾದರಿಗಳನ್ನು ನೀಡಿದರು. ಸ್ತ್ರೀ ಪ್ರಜ್ಞೆ ಕುರಿತು ತಮ್ಮ ಕೃತಿಗಳ ಮೂಲಕ ಜಾಗೃತಿ ಮೂಡಿಸಿದ ವೀಣಾ ಶಾಂತೇಶ್ವರ ವಿದ್ಯಾರ್ಥಿಗಳನ್ನು ಸೃಷ್ಟಿಸಿದರೆ, ಲೋಹಿಯಾ ಪ್ರಕಾಶನದ ಮೂಲಕ ಅಮತ್ಯಮೂಲ್ಯ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಚನ್ನಬಸವಣ್ಣ ಸಾಹಿತ್ಯ ದಾಸೋಹ ಮಾಡಿದರು ಎಂದರು.
ವಿಶ್ವದಲ್ಲಿ ನಾವು ಪ್ರತಿಯೊಂದು ದೇಶದವರು ಒಬ್ಬರ ಮೇಲೊಬ್ಬರು ಅವಲಂಬನೆ ಇರುವುದರಿಂದ ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಇರಾನ್-ಅಮೇರಿಕ ಮಧ್ಯೆ ಯುದ್ಧ ನಡೆದರೆ ನಮ್ಮ ಮನೆಗಳಲ್ಲಿ ಗ್ಯಾಸ್ ಟ್ರಬಲ್ ಶುರುವಾಗಿದೆ ಎಂದು ನುಡಿದರು.
ಪ್ರಶಸ್ತಿ ಪುರಸ್ಕೃತ ಡಾ. ವೀಣಾ ಶಾಂತೇಶ್ವರ ಮಾತನಾಡಿ, ವೈಚಾರಿಕ ಉದಾರತೆ ಗುರುಲಿಂಗ ಕಾಪಸೆ ಅವರ ದೊಡ್ಡ ಗುಣ. ಸದಾ ಮಹಿಳೆಯರನ್ನು ಪ್ರೋತ್ಸಾಹಿಸುತ್ತ, ಸಾಧನೆಗೆ ಪ್ರೇರೇಪಿಸುತ್ತಿದದರು. ಕಾಪಸೆ ಅವರು ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಕಡ್ಡಾಯ ಎಂದು ಹೇಳುವುದರೊಂದಿಗೆ ಎಲ್ಲ ಭಾಷೆಗಳನ್ನೂ ಅಪ್ಪಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಜೀವನದುದ್ದಕ್ಕೂ ಶಾಂತಿ ಮಂತ್ರವನ್ನೇ ಅವರು ಪ್ರತಿಪಾದಿಸಿದರು. ಸದ್ಯ ಯುದ್ಧೋನ್ಮಾದದಲ್ಲಿರುವ ಜಗತ್ತಿಗೆ ಶಾಂತಿಮoತ್ರದ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ ಸಿ. ಚನ್ನಬಸವಣ್ಣ ಮಾತನಾಡಿ, ಲೋಹಿಯಾ ಸಿದ್ಧಾಂತವನ್ನು ಯುವ ಜನಾಂಗಕ್ಕೆ ತಲುಪಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಚಿಂತನಾ ಲಹರಿ ಸರಿಯಿದ್ದರೆ, ಬದ್ಧತೆ ಇದ್ದರೆ ನಾವು ಅಂದುಕೊoಡಿದ್ದನ್ನು ಸಾಧಿಸಲು ಸಾಧ್ಯ. ಸಾಹಿತ್ಯದ ಪರಿಚಾರಕನಾದ ನನಗೆ ಪ್ರಶಸ್ತಿ ಸಂದಿರುವುದು ಖುಷಿ ನೀಡಿದೆ ಎಂದು ಹೇಳುವುದರೊಂದಿಗೆ ತಮ್ಮ ಪ್ರಶಸ್ತಿ ಮೊತ್ತದಲ್ಲಿ 5೦೦೦ ರೂ. ವಿದ್ಯಾರ್ಥಿ ಬಹುಮಾನಕ್ಕೆ ನೀಡುವುದಾಗಿ ಹೇಳಿದರು.
ಚಂದ್ರಕಾoತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೀರಣ್ಣ ರಾಜೂರ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.ಪೂಜ್ಯನೀಯ ದಿ. ಡಾ. ಗುರುಲಿಂಗ ಕಾಪಸೆ ಮಕ್ಕಳು ಶ್ರೀ ಚಂದ್ರಶೇಖರ ಕಾಪಸೆ, ಶ್ರೀಮತಿ ಉಷಾ ಕಾಪಸೆ, ರವಿ ಕಾಪಸೆ, ಸೊಸೆ ಡಾ. ಜ್ಯೋತಿ ಕಾಪಸೆ, ಮೊಮ್ಮಗ ಸಂಕಲ್ಪ್ ಕಾಪಸೆ, ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಮಗಳು ಶ್ರೀಮತಿ ಶಶಿಕಲಾ ನಿಂಬಾಳ (ಅಮೇರಿಕ) ಆನ್ಲೈನ್ ದಲ್ಲಿ ಭಾಗಿಯಾಗಿದ್ದರು.


