Belagavi NewsBelgaum NewsKannada NewsKarnataka News

*ಉತ್ತರ ಕರ್ನಾಟಕದ ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು: ಕುಂಚಿಟಿಗರ ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಕ್ಷಿಣ ಕರ್ನಾಟಕದ ದೇವಾಲಯಗಳ ಮಾದರಿಯಲ್ಲಿ ಉತ್ತರ ಕರ್ನಾಟಕದ ದೇವಾಲಯಗಳನ್ನೂ ಸ್ವಚ್ಛತೆ, ಶಿಸ್ತುಬದ್ಧ ಪೂಜಾ ಪದ್ಧತಿ ಹಾಗೂ ಭಕ್ತಸೇವೆಯ ಮೂಲಕ ಅಭಿವೃದ್ಧಿಪಡಿಸಬೇಕೆಂದು ಕುಂಚಿಟಿಗರ ಸಂಸ್ಥಾನ ಮಠದ ಜಗದ್ಗುರು ಶ್ರೀ ಹನುಮಂತನಾಥ ಮಹಾಸ್ವಾಮೀಜಿ ಹೇಳಿದರು.

ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಹಾಗೂ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ, ಹಿರೇಮಠ-ಹುಕ್ಕೇರಿ ಇವರ ಆಶ್ರಯದಲ್ಲಿ ಬೆಳಗಾವಿಯ ಲಕ್ಷ್ಮೀ ಟೆಕ್ಕಡಿಯಲ್ಲಿರುವ ಶ್ರೀ ಹಿರೇಮಠದಲ್ಲಿ ಜುಲೈ 21ರಿಂದ 28ರವರೆಗೆ ಆಯೋಜಿಸಿರುವ ಎಂಟು ದಿನಗಳ ಅರ್ಚಕರ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನರ ಶ್ರದ್ಧೆ ಮತ್ತು ಭಕ್ತಿ ದೇವಾಲಯಗಳ ಮೂಲಕ ಉದಾತ್ತೀಕರಣಗೊಳ್ಳುತ್ತದೆ. ಪ್ರತಿಮಾ ಆರಾಧನೆಯ ಮೂಲಕ ಸಾಮಾನ್ಯ ಜನರು ದೈವೀಕ ಪ್ರಜ್ಞೆಯನ್ನು ಹೊಂದುತ್ತಾರೆ. ದಕ್ಷಿಣ ಕರ್ನಾಟಕದ ದೇವಾಲಯಗಳು ಸ್ವಚ್ಛತೆ ಹಾಗೂ ಕ್ರಮಬದ್ಧ ಪೂಜಾ ಆಚರಣೆಗಳಿಂದ ಜನಮನ್ನಣೆ ಗಳಿಸಿರುವಂತೆ, ಉತ್ತರ ಕರ್ನಾಟಕದ ದೇವಾಲಯಗಳೂ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಇದೇ ಪೂಜಾ ಪದ್ಧತಿ ಕೈಪಿಡಿ ಎಂಬ ಕಿರು ಕೃತಿ ಪೂಜ್ಯರಿಂದ ಲೋಕಾರ್ಪಣೆ ಆಯಿತು.

ಕಾರಂಜಿ ಮಠದ ಪರಮಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅರ್ಚಕರು ಪೂಜಾ ವಿಧಾನ, ವೇಷಭೂಷಣ ಹಾಗೂ ಮಂತ್ರೋಚ್ಚಾರಣೆಯಲ್ಲಿ ಶುದ್ಧತೆ ಮತ್ತು ಸ್ಪಷ್ಟತೆಯನ್ನು ಕಾಪಾಡಿಕೊಳ್ಳಬೇಕು. ಮಂತ್ರೋಚ್ಚಾರಣೆಯಲ್ಲಿ ದೋಷಗಳು ಉಂಟಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಹೇಳಿದರು.

Home add -Advt

ಮುಖ್ಯ ವಕ್ತಾರ ಶ್ರೀ ಮನೋಹರ ಮಠಜಿ ಮಾತನಾಡಿ, ಅರ್ಚಕನು ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿದ್ದು, ಶುದ್ಧ ಅಂತಃಕರಣ, ಪ್ರಾಮಾಣಿಕತೆ ಹಾಗೂ ಆದರ್ಶ ನಡೆ-ನುಡಿಗಳ ಮೂಲಕ ಸೇವೆ ಸಲ್ಲಿಸಿದಾಗ ಮಾತ್ರ ದೇವಾಲಯ, ಭಕ್ತರು ಹಾಗೂ ಸಮಾಜದ ಉನ್ನತಿಗೆ ಕಾರಣನಾಗುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿದ್ದರು. 

ಬೆಳಗಾವಿ ಜಿಲ್ಲೆಯ ವಿವಿಧ ಸಮುದಾಯಗಳ ಅರ್ಚಕರನ್ನು ಒಂದೇ ವೇದಿಕೆಗೆ ಕರೆತಂದು ತರಬೇತಿ ಶಿಬಿರ ಯಶಸ್ವಿಗೊಳಿಸಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು. ಕಾರ್ಯಕ್ರಮವನ್ನು ನಗರ ಸಂಘಚಾಲಕ ಬಾಳಣ್ಣ ಕಗ್ಗಣಗಿ ಉದ್ಘಾಟಿಸಿದರು.

ಉದ್ಯಮಿ ಪಿ.ಎಸ್. ಹಿರೇಮಠ, ವೈದ್ಯರಾದ ಡಾ. ಎಂ.ಬಿ. ಬೆಲ್ಲದ ಹಾಗೂ ಡಾ. ಕೇದಾರೇಶ್ವರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಬಾಗುಜಿ ನೆರವೇರಿಸಿದರು. 

ವಿಜಯ ಜಾದವ್ ಶಾಂತಿ ಮಂತ್ರ ಹಾಗೂ ಜಯಘೋಷ ನಡೆಸಿಕೊಟ್ಟರೆ, ಬಸವರಾಜ ಹಳಿಂಗಳಿ ವಂದಿಸಿದರು. ಆರಂಭದಲ್ಲಿ ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ಗಂಗಾರತಿ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ನೀಡಿದರು.

Related Articles

Back to top button