
ಪ್ರಗತಿವಾಹಿನಿ ಸುದ್ದಿ: ಮಹಿಳಾ ಪಿಎಸ್ ಐ ಓರ್ವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ ಐ ಮಂಗಳಮ್ಮ ನಾಪತ್ತೆಯಾದವರು. ತನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಮಂಗಳಮ್ಮ ಅವರ ಮಗಳು ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಏಪ್ರಿಲ್ 3ರಂದು ಡಿವೈಎಸ್ ಪಿ ಅವರ ಕಚೇರಿಯಲ್ಲಿ ಸಭೆಗೆ ಬಂದಿದ್ದ ಪಿಎಸ್ ಐ ಮಂಗಳಮ್ಮ ಅವರಿಗೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ ಸಮವಸ್ತ್ರ ಬದಲಿಸಿ ಸಿವಿಲ್ ಡ್ರೆಸ್ ನಲ್ಲಿ ಹೊರಗೆ ಹೋಗಿದ್ದರು. ಅದಾದ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅತ್ತ ಮನೆಗೂ ಹೋಗಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಮಂಗಳಮ್ಮ ಅವರ ಮಗಳಿಗೆ ಡಿವೋರ್ಸ್ ಆಗಿತ್ತು. ಕೆಲ ದಿನಗಳಿಂದ ತಾಯಿ-ಮಗಳು ಒಟ್ಟಿಗೆ ವಾಸವಾಗಿದ್ದರು. ಕೌಟುಂಬಿಕ ಕಲಹಕ್ಕೆ ಬೇಸತ್ತು ಮನೆ ಬಿಟ್ಟು ಹೋದರಾ? ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಪಿಎಸ್ ಐ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

