
ಪ್ರಗತಿವಾಹಿನಿ ಸುದ್ದಿ: 16 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ಶಿಕ್ಷಕ, ಆಕೆ ಗರ್ಭವತಿಯಾಗುತ್ತಿದ್ದಂತೆ ಗರ್ಭಪಾತ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಚಳ್ಳಕೆರೆಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿದು ಮಕ್ಕಳ ರಕ್ಷಣಾಧಿಕಾರಿ ದೂರು ನೀಡಿದ್ದು, ಅದರ ಮೇರೆಗೆ ಶಿಕ್ಷಕ ಹಾಗೂ ಗರ್ಭಪಾತ ಮಾಡಿದ ವೈದ್ಯೆ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಹೆಚ್.ಒ. ರಾಜಣ್ಣ ಎಂಬಾತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈಕೃತ್ಯದಿಂದ ಬಾಲಕಿ ಗರ್ಭ ಧರಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ರಾಜಣ್ಣ, ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಆಸ್ಪತ್ರೆಯ ವೈದ್ಯೆ ಶಂಕರಲಕ್ಷ್ಮೀ ಅವರ ಸಹಾಯದಿಂದ ಬಾಲಕಿಗೆ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಮಕ್ಕಳ ರಕ್ಷಣಾಧಿಕಾರಿ ರೇಖಾ ಅವರು ಚಳ್ಳಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ರಾಜಣ್ಣ ಮತ್ತು ಗರ್ಭಪಾತ ಮಾಡಿದ ವೈದ್ಯೆ ಶಂಕರಲಕ್ಷ್ಮೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


