
ಪ್ರಗತಿವಾಹಿನಿ ಸುದ್ದಿ: ಸುಮಾರು 280ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತಿದ್ದ ಬೋಟ್ ಮಗುಚಿ ಬಿದ್ದಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 250ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಘಟನೆ ಅಂಡಮಾನ್ ಸಮುದ್ರದಲ್ಲಿ ನಡೆದಿದೆ.
ಬಾಂಗ್ಲಾದೇಶದ ತೆಕ್ಕಾಫ್ನಿಂದ ಮಲೇಷ್ಯಾಕ್ಕೆ ಅಕ್ರಮವಾಗಿ ತೆರಳುತ್ತಿದ್ದ ಈ ಟ್ರಾಲರ್ ಏಪ್ರಿಲ್ 4 ರಂದು ಹೊರಟಿತ್ತು. ಬೋಟ್ನಲ್ಲಿ ಸಾಮರ್ಥ್ಯಕ್ಕೂ ಮೀರಿ ಜನರನ್ನು ತುಂಬಲಾಗಿತ್ತು. ಸಮುದ್ರದ ಮಧ್ಯಭಾಗ ತಲುಪಿದಾಗ ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಬಿರುಗಾಳಿಗೆ ಸಿಲುಕಿದ ಬೋಟ್, ಅಂಡಮಾನ್ ದ್ವೀಪಗಳ ಸಮೀಪ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಬೋಟ್ನಲ್ಲಿ ಅತಿಯಾದ ಜನದಟ್ಟಣೆ ಇದ್ದುದರಿಂದಲೇ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ದುರಂತ ಸಂಭವಿಸಿದ ಬಳಿಕ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದ ಬಾಂಗ್ಲಾದೇಶದ ಕರಾವಳಿ ಕಾವಲು ಪಡೆಯು ಈವರೆಗೆ ಕೇವಲ ಒಂಬತ್ತು ಮಂದಿಯನ್ನು ಮಾತ್ರ ರಕ್ಷಿಸಲು ಯಶಸ್ವಿಯಾಗಿದೆ. ಸಮುದ್ರದ ಅಲೆಗಳ ಮಧ್ಯೆ ಪ್ಲಾಸ್ಟಿಕ್ ಡ್ರಮ್ಗಳು ಮತ್ತು ಮರದ ತುಂಡುಗಳನ್ನೇ ಆಸರೆಯಾಗಿ ನಂಬಿ ತೇಲುತ್ತಿದ್ದವರನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.
ಇನ್ನುಳಿದ 250 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದ್ದರೂ, ಯಾರೂ ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.
ದುರಂತದಿಂದ ಬದುಕುಳಿದವರು ನೀಡಿರುವ ಮಾಹಿತಿ ಅಕ್ಷರಶಃ ಎದೆನಡುಗಿಸುವಂತಿದೆ. ಬೋಟ್ ಮುಳುಗುವ ಮುನ್ನವೇ ಕಿಕ್ಕಿರಿದು ತುಂಬಿದ್ದ ಕಾರಣ ಸಣ್ಣ ಜಾಗದಲ್ಲಿ ಉಸಿರಾಡಲು ಸಾಧ್ಯವಾಗದೆ ಸುಮಾರು 25 ರಿಂದ 30 ಮಂದಿ ಮೃತಪಟ್ಟಿದ್ದರು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.


