Belagavi NewsBelgaum NewsKannada NewsKarnataka News

*ರಸಗೊಬ್ಬರ, ಬೀಜ ಕೊರತೆ ಆಗದಂತೆ ನಿಗಾವಹಿಸಲು ಡಿಸಿ ಮೊಹಮ್ಮದ್ ರೋಷನ್ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ‌‌ ಕೊರತೆ ಆಗದಂತೆ ನಿಗಾವಹಿಸುವುದರ ಜೊತೆಗೆ ಸಾಧ್ಯವಾದಷ್ಟು ರಸಗೊಬ್ಬರಗಳ‌ ಬಳಕೆ ಕಡಿಮೆ ಮಾಡುವಂತೆ ರೈತರಲ್ಲಿ‌ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ (ಏ.15) ಜರುಗಿದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆ ಹಾಗೂ ಭೂ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ‌ ಬಾರಿ‌ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿರುವುದಿಲ್ಲ ಈ ಬಾರಿಯು ಸಹ ಅದೇ ರೀತಿ ಪೂರೈಕೆಗೆ ಕ್ರಮ ವಹಿಸಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ ರಸಗೊಬ್ಬರ ಬಳಕೆಯಲ್ಲಿ ಕಡಿಮೆ ಆಗಿದ್ದು, ಈ ಬಾರಿಯು ಅಧಿಕಾರಿಗಳು, ರಸಗೊಬ್ಬರ ಪೂರೈಕೆದಾರರು ಸಮನ್ವಯ ಸಾಧಿಸಿ ರೈತರಲ್ಲಿ ರಸಗೊಬ್ಬರ ಬಳಕೆ‌ಯನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸಬೇಕು ಎಂದರು.

ರಸಗೊಬ್ಬರ ಮಾರಾಟದಲ್ಲಿ ಕೃತಕ ಅಭಾವ, ಕಾಳಸಂತೆಯಲ್ಲಿ‌ ಮಾರಾಟ ಮಾಡಬಾರದು. ಕಳೆದ ಬಾರಿ ಕೆಲ ಸ್ಥಳಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ‌ ದರಕ್ಕೆ ಮಾರಾಟ ಮಾಡಿದರ ಕುರಿತು ದೂರುಗಳು ಬಂದಿದ್ದು ಈ ಬಾರಿ ಆ ರೀತಿ ಆಗದಂತೆ ನಿಗಾವಹಿಸಲು ತಿಳಿಸಿದರು.

Home add -Advt

ರಸಗೊಬ್ಬರ ದಾಸ್ತಾನು ಕುರಿತು ರೈತರಿಗೆ ಸರಿಯಾದ ಮಾಹಿತಿ ಒದಗಿಸಬೇಕು. ರೈತರಲ್ಲಿ ವಿನಾಕಾರಣ ಆತಂಕ‌ ಮೂಡಿಸದೆ  ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆ ಆಗದಂತೆ ನೋಡೊಕೊಳ್ಳಲು ಸೂಚಿಸಿದರು.

ಇಲಾಖೆ ವತಿಯಿಂದ ರೈತರಿಗೆ ಎಲ್ಲ‌ ರೀತಿಯ ಮಾಹಿತಿ ವಿನಿಮಯ ಮಾಡಬೇಕು. ರೈತ ಸಂಘಟನೆಗಳೊಂದಿಗೆ ನಿಯಮಿತವಾಗಿ ಸಭೆ ಜರುಗಿಸಿ ಪರಿಸ್ಥಿತಿಯ ವಿವರಗಳನ್ನು ಒದಗಿಸಲು ತಿಳಿಸಿದರು.

ಜಿಲ್ಲೆಗೆ ಬೇಕಾದಂತಹ ರಸಗೊಬ್ಬರ ತರಲು ಇಲಾಖೆಯ ಜೊತೆಗೆ ಪೂರೈಕೆದಾರರು ಪ್ರಯತ್ನಿಸಬೇಕು. ಜಿಲ್ಲೆಯ ಎಲ‌್ಲ ರಸಗೊಬ್ಬರ ಅಂಗಡಿಗಳ ದಾಸ್ತಾನಿನ‌ ವಿವರ ಲಭ್ಯವಿದ್ದು, ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಪೂರೈಕೆದಾರರು ಆವಕ ಜಾವಕ‌ ಮಾಹಿತಿಯನ್ನು  ಪ್ರತಿದಿನ ಕಡ್ಡಾಯವಾಗಿ ನಮೂದಿಸಬೇಕು. 

ಅತಿಯಾದ ರಸಗೊಬ್ಬರ ಬಳಕೆಯಿಂದಾಗುವ ದುಷ್ಪರಿಣಾಮಗಳ‌ ಕುರಿತು ರೈತರಿಗೆ ತಿಳಿ ಹೇಳುವ‌ ಮೂಲಕ  ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು  ಮನವರಿಕೆ ಮಾಡಬೇಕು. 

ವಿಚಕ್ಷಣಾ ತಂಡ ಚುರುಕುಗೊಳಿಸಲು ನಿರ್ದೇಶನ

ಜಿಲ್ಲಾ ವೀಚಕ್ಷಣ‌ ತಂಡಗಳು ಅತೀ ಜಾಗೃತವಾಗಿ ಕಾರ್ಯ ನಿರ್ವಹಿಸಬೇಕು.‌ ರಸಗೊಬ್ಬರ ಕುರಿತು ದೂರುಗಳು ಬಂದಾಗ ವೀಚಕ್ಷಣಾ ತಂಡಗಳು ತ್ವರಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ  ನಿಖರ ವರದಿಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕಳೆದ ಬಾರಿ ರಸಗೊಬ್ಬರ‌ ಹಾಗೂ ಬಿತ್ತನೆ ಬೀಜ ವಿತರಣೆಯಲ್ಲಿ ಕೃಷಿ ಇಲಾಖೆ‌ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಈ ಬಾರಿಯೂ ಅದೇ ರೀತಿ ಕಾರ್ಯನಿರ್ವಹಿಸುವಂತೆ ಆಶಯ ವ್ಯಕ್ತ ಪಡಿಸಿ ರಸಗೊಬ್ಬರ ಬಿತ್ತನೆ ಬೀಜ ಪೂರೈಕೆಯಲ್ಲಿ‌ ಅನಗತ್ಯ ಗೊಂದಲಗಳಿಗೆ ಆಸ್ಪದ‌ ನೀಡದೆ ಸಮರ್ಪಕವಾಗಿ ನಿರ್ವಹಿಸಲು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ರೈತರು ಜಮೀನಿನಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದನ್ನು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡುವಂತಹ‌ ಸಂದರ್ಭದಲ್ಲಿ  ಪೂರೈಕೆದಾರರು ರೈತರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ. ರಸಗೊಬ್ಬರ, ಬಿತ್ತನೆ ಬೀಜಗಳ ಕೃತಕ‌ ಅಭಾವ ಅಥವಾ ಹೆಚ್ಚಿನ ದರಕ್ಕೆ‌ ಮಾರಾಟ ಮಾಡಬಾರದು ಎಂದು ಹೇಳಿದರು.

ಸಾವಯವ ಕೃಷಿಗೆ ಒತ್ತು ನೀಡಲು ಇದು ಉತ್ತಮ ಸಮಯವಾಗಿದ್ದು ಕೃಷಿ ಇಲಾಖೆ ಹಾಗೂ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆದಾರರು ರೈತರಲ್ಲಿ‌ ಅರಿವು ಮೂಡಿಸಬೇಕು.

ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು. ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ, ವೀಚಕ್ಷಣಾ ತಂಡಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದು ದಾಸ್ತಾನು ಹಾಗೂ ಮಾರಾಟದಲ್ಲಿ ಯಾವುದೆ ರೀತಿಯ ಸಮಸ್ಯೆಗಳಾಗದಂತೆ ನಿಗಾವಹಿಸಲು‌ ಜಿಲ್ಲಾ‌ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ‌್ ಶಿಂಧೆ ಅವರು ತಿಳಿಸಿದರು.

ಜಂಟಿ ಕೃಷಿ‌ ನಿರ್ದೇಶಕರಾದ ಎಚ್.ಡಿ.ಕೋಳೆಕರ ಅವರು ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ‌ ಜಿಲ್ಲೆಗೆ ಬೇಕಾದಂತಹ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನು ಹೊಂದಿದ್ದು ರಸಗೊಬ್ಬರ ಪೂರೈಕೆ‌ಮಾಡುವ ಸಂಸ್ಥೆಗಳ ಪ್ರತಿನಿಧಿ ಹಾಗೂ ಸಾಗಾಣಿಕೆ ಸಂಸ್ಥೆಯವರೊಂದಿಗೆ ಸಭೆ ಜರುಗಿಸಲಾಗಿರುತ್ತದೆ ಎಂದರು.

ಜಿಲ್ಲಾ‌ ಮಟ್ಟದಲ್ಲಿ 10 ಜನ ಹಿರಿಯ ಅಧಿಕಾರಿಗಳನ್ನೊಳಗೊಂಡ ರಸಗೊಬ್ಬರ ಮೇಲ್ವಿಚಾರಣೆ ಕೋಶವನ್ನು ರಚಿಸಿ ಮೇಲ್ವಿಚಾರಣೆ ಮಾಡಲು ಕ್ರಮವಹಿಸಲಾಗಿದ್ದು ಕೃಷಿಯೇತರ ಚಟುವಟಿಕೆಗಳಿಗೆ ಯೂರಿಯಾ ರಸಗೊಬ್ಬರ ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರ‌ಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

 ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ  ಮಹಾಂತೇಶ ಮುರಗೋಡ, ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು, ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆದಾರರು ಉಪಸ್ಥಿತರಿದ್ದರು.

Related Articles

Back to top button