*ದೇಶಭಕ್ತಿಯೊಂದಿಗೆ ದೇಶೀಯ ಸಂಸ್ಕಾರ ಅಳವಡಿಸಿಕೊಳ್ಳಿ: ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವ್ಯಕ್ತಿಯ ಜನನದಿಂದ ಮರಣದವರೆಗೆ ಆತನ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವುದೇ ಸಂಸ್ಕಾರ. ಸಮಾಜದಲ್ಲಿ ಜವಾಬ್ದಾರಿಯುತ ಮತ್ತು ಸಭ್ಯ ನಾಗರೀಕರಾಗಿ ಬದುಕಲು ನಾವೆಲ್ಲರೂ ದೇಶಭಕ್ತಿಯೊಂದಿಗೆ ದೇಶೀಯ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಂದು ಶಿವಬಸವ ನಗರದ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದಲ್ಲಿ ಹಮ್ಮಿಕೊಂಡ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಪ್ರಾದ್ಯಾಪಕ ವಿರೇಶ ಪಾಟೀಲ ಈ ಪ್ರಕೃತಿ ಸಾಧನೆ ಮಾಡಬಯಸುವ ಸಾಧಕರಿಗೆ ಎಲ್ಲ ರೀತಿಯ ಅವಕಾಶ ನೀಡಿದೆ. ಅದರ ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಏಕೆಂದರೆ ನಮ್ಮ ಜೀವನದ ನಿರ್ಮಾತೃಗಳು ನಾವೇ ಆಗಿರುತ್ತೇವೆ. ಜಗತ್ತಿನಲ್ಲಿ ಮನುಷ್ಯನಿಗೆ ಅಸಾಧ್ಯ ಎಂಬುದೇ ಇಲ್ಲ. ನಮ್ಮ ಜ್ಞಾನ ಹಾಗೂ ಸಾಮರ್ಥ್ಯದ ನಿಜವಾದ ಅರಿವು ನಮಗಾದರೆ ಎಲ್ಲವನ್ನೂ ಸಾಧಿಸಬಹುದು. ಯಶಸ್ಸು ಸುಖಾ ಸುಮ್ಮನೆ ದೊರೆಯುವುದಿಲ್ಲ. ಅದಕ್ಕೆ ನಿರಂತರ ಪರಿಶ್ರಮ ಅವಶ್ಯಕ. ವಿದ್ಯಾರ್ಥಿಗಳು ಪ್ರಯತ್ನವಾದಿಗಳಾಗಬೇಕೆ ಹೊರತು ನೆಪವಾದಿಗಳಾಗಬಾರದು ಎಂದರು.
ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಮ್ಮಿಗಟ್ಟಿ ಬಸವಯೋಗಾಶ್ರಮದ ಬಸವಾನಂದ ಮಹಾಸ್ವಾಮಿಗಳು ಮಾತನಾಡಿ ಆಧುನಿಕವಾಗಿ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇದೂವರೆಗೂ ಸಂಶೋಧಕರಿಗೆ ನೆನಪಿನ ಶಕ್ತಿ ವೃದ್ಧಿಸುವ ಔಷಧಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಓಂಕಾರ ಸ್ಮರಣೆ ನಿತ್ಯ ಮಾಡಿದರೆ ಅವನ ನೆನಪಿನ ಶಕ್ತಿ ಎಂದಿಗೂ ಕುಂದುವುದಿಲ್ಲ. ಇಂದು ಮನುಷ್ಯ
ಆಕಾಶದಲ್ಲಿ ಪಕ್ಷಿಯಂತೆ ಹಾರಬಲ್ಲ, ನೀರಿನಲ್ಲಿ ಮೀನಿನಂತೆ ಈಜಬಲ್ಲ, ಅವನ ಬುದ್ದಿ ವಿಶಾಲವಾಗಿದೆ ಆದರೆ ಹೃದಯ ಮಾತ್ರ ಸಂಸ್ಕಾರ ಕೊರತೆಯಿಂದ ಬಾಡಿಹೋಗಿದೆ. ಯುವ ಮನಸ್ಸುಗಳು ಬಾಡದಂತೆ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿರುವ ನಾಗನೂರು ರುದ್ರಾಕ್ಷಿ ಮಠದ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯ ಮೇಲೆ ಸಂಚಾರಿ ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ, ಮುಖ್ಯೋಪಾಧ್ಯಾಯ ಮಡಿವಾಳಪ್ಪ ಸಂಗೊಳ್ಳಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿದರು. ಎಸ್.ಜಿ.ಬಿ.ಐ.ಟಿ. ಕಾಲೇಜು ಪ್ರಾಧ್ಯಾಪಕ ಡಾ. ಮಂಜುನಾಥ ಶರಣಪ್ಪನವರ ನಿರೂಪಿಸಿದರು. ಕೊನೆಗೆ ಮಹಾಂತೇಶ ಪಾಟೀಲ ವಂದಿಸಿದರು.
