Belagavi NewsBelgaum NewsKannada NewsKarnataka NewsPolitics

*ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳಬೇಕು: ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು ಸಮಪರ್ಕವಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಶ್ರಮ ವಹಿಸಬೇಕು. ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯಬೇಕಿರುವ ಎಲ್ಲ ಸೌಕರ್ಯಗಳು ಕಡ್ಡಾಯವಾಗಿ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಯು. ನಿಸಾರ್ ಅಹಮ್ಮದ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಏ.15) ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ 2025 26ನೇ 3ನೇ ಮತ್ತು 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮಕ್ಕಳ ಮಾಹಿತಿ ಪಡೆದು ಒಂದನೇ ತರಗತಿ ಪ್ರವೇಶಕ್ಕೆ ಅರ್ಹವಿರುವ ಮಕ್ಕಳನ್ನು ಶಾಲೆಗಳಿಗೆ ಸೇರ್ಪಡೆಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮನೆ ಮನೆಗಳನ್ನು ಸಮೀಕ್ಷೆ ನಡೆಸಿ ಅವರನ್ನು ಶಾಲೆಗಳಿಗೆ ಸೇರ್ಪಡೆಗೊಳಿಸುವಂತೆ ಸೂಚಿಸಬೇಕು ಎಂದು ತಿಳಿಸಿದರು.

ರಾಜ್ಯದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಸರ್ಕಾರದ ಸದಾಶಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ದೂರವಾಗದಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

Home add -Advt

ವಲಸೆ ಹೋದ‌ ಮಕ್ಕಳನ್ನು ಸ್ಟಾಟ್ಸ್  ಆಯ್. ಡಿ‌. ಮೂಲಕ ಗುರುತಿಸಿ ಮರಳಿ ಶಾಲೆಗೆ ತರುವಂತಹ ಕಾರ್ಯವಾಗಬೇಕು. ಶಾಲೆಗಳಲ್ಲಿನ ಶೌಚಾಲಯಗಳ ದುರಸ್ತಿ‌ ಕೈಗೊಳ್ಳಬೇಕು. ಆಯೋಗದ‌ ಸದಸ್ಯರು  ಅನೀರಿಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ‌ ಜಿಲ್ಲೆಯಲ್ಲಿನ ಯುವಕರಲ್ಲಿನ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಕಟ್ಟಡ ಕಾರ್ಮಿಕರಿಗೆ ಇರುವಂತಹ‌ ಸೌಲಭ್ಯಗಳ‌ ಕುರಿತು ಜಾಗೃತಿ ಮೂಡಿಸುವ‌ ಕಾರ್ಯವಾಗಬೇಕು.

ಕೊಳಗೇರಿ ಪ್ರದೇಶಗಳಲ್ಲಿನ‌ ಕೆಲ‌ ವಿಕಲಚೇತನರಿಗಾಗಿ ಸರಕಾರದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳು ದೊರಕುತ್ತಿಲ್ಲ. ಈ ಕುರಿತು ಜಿಲ್ಲೆಯ ಎಲ್ಲ ಕೋಳಗೇರಿ ಪ್ರದೇಶಗಳಲ್ಲಿ ಸಮೀಕ್ಷೆ ಜರುಗಿಸಿ ಪ್ರತಿಯೊಬ್ಬ ವಿಕಲಚೇತನರಿಗೆ ಸರಕಾರದ ಸೌಲಭ್ಯ ದೊರಕಿಸಿಕೊಡಲು ತಿಳಿಸಿದರು.

ಆಯೋಗಕ್ಕೆ ನೇಮಕವಾದಂತಹ ನಾಮ‌ನಿರ್ದೇಶಿತ ಸದಸ್ಯರುಗಳು ನಿಯಮಿತವಾಗಿ ಸಭೆಗಳನ್ನು ಜರುಗಿಸಿ ತಮ್ಮ‌ ವ್ಯಾಪ್ತಿಯಲ್ಲಿನ  ಕುಂದು ಕೊರತೆಗಳನ್ನು ಆಲಿಸಿ ಆಯೋಗದ ಸಭೆಯಲ್ಲಿ ತಮ್ಮ‌ ವ್ಯಾಪ್ತಿಯಲ್ಲಿನ ಕುಂದು‌ ಕೊರತೆಗಳ ಮಾಹಿತಿ ನೀಡಬೇಕು ಎಂದು  ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ತಿಳಿಸಿದರು.

ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಶಾಲೆಗಳಲ್ಲಿನ ಶೌಚಾಲಯ ನಿರ್ಮಾಣಕ್ಕೆ ಹಾಗೂ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳಿಗಾಗಿ  ಬೆಂಚ್ ಖರೀದಿ‌ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಕೊಳಗೇರಿ ಪ್ರದೇಶಗಳಲ್ಲಿನ ವಿಕಲಚೇತನರ‌ ಸಮೀಕ್ಷಾ ಕಾರ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರ‌ ಪಡೆದುಕೊಳ್ಳುವಂತೆ ತಿಳಿಸಿದರು.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕರಾದ ಆಸೀಫ್(ರಾಜು)ಸೇಠ ಮಾತನಾಡಿ ವಿವಿಧ ಶೈಕ್ಷಣಿಕ ಹಂತಗಳ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ಪಡೆಯಲು ಸಹಾಯವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ  ಮೂಲಕ ಒದಗಿಸಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತ ಯುವಕರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಲು , ಅಗತ್ಯ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಎಫ್. ಯು ಪೂಜೇರ ಸಭೆ ನಿರ್ವಹಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ, ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ ಕೋಳೇಕರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಡಿಡಿಪಿಐ ಲೀಲಾವತಿ ಹಿರೇಮಠ, ಕಾರ್ಮಿಕ ಇಲಾಖೆ ಅಧಿಕಾರಿಗಳು, ಆಯೋಗದ‌‌ ನಾಮನಿರ್ದೇಶಿತ ಸದಸ್ಯರು  ಸಭೆಯಲ್ಲಿ ಹಾಜರಿದ್ದರು.

Related Articles

Back to top button