*ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ವಿಶ್ವಕ್ಕೆ ಮಾದರಿ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವಣ್ಣನವರು ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದವರಲ್ಲ, ಅವರು ಇಡೀ ಮಾನವಕುಲದ ಆಸ್ತಿಯಾಗಿದ್ದು, ನಾವೆಲ್ಲರೂ ಜಾತಿ-ಧರ್ಮದ ಭೇದ ಮರೆತು ಅವರ ಉನ್ನತ ತತ್ವಗಳನ್ನು ಮತ್ತು ಜೀವನದ ಆದರ್ಶಗಳನ್ನು ಪಾಲಿಸಿ, ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಸವೇಶ್ವರ ಉದ್ಯಾನವನದಲ್ಲಿ ಏ.20 (ಸೋಮವಾರ) ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಇತಿಹಾಸವು ಅತ್ಯಂತ ವಿಸ್ತಾರವಾಗಿದ್ದು, ಅವರ ಬದುಕು ಮತ್ತು ಸಮಾಜಮುಖಿ ಹೋರಾಟದ ನೈಜ ಚಿತ್ರಣವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತಹ ಹೆಚ್ಚಿನ ಕಾರ್ಯಕ್ರಮಗಳ ಅಗತ್ಯವಿದ್ದು ಈ ನಿಟ್ಟಿನಲ್ಲಿ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸರ್ಕಾರವು ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಬಸವಣ್ಞನವರ ವಿಚಾರಗಳು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಮೂಡಿಸಲು ದಾರಿದೀಪವಾಗಿವೆ ಎಂದು ಸಚಿವರಾದ ಸತೀಶ ಜಾರಕೊಹೊಳಿ ತಿಳಿಸಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಿಮಿಸಿದ್ದ ಮ.ನ.ರ. ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಾ ದಯಣ್ಣವರ ಅವರು ಮಾತನಾಡಿ ಒಬ್ಬ ವ್ಯಕ್ತಿಯನ್ನು ಕೇವಲ ಬಾಹ್ಯವಾಗಿ ನೋಡುವ ಬದಲು, ಅವರನ್ನು ವೈಜ್ಞಾನಿಕ ಹಾಗೂ ದಾರ್ಶನಿಕ ದೃಷ್ಟಿಕೋನದಿಂದ ಅವಲೋಕಿಸಿದಾಗ ಮಾತ್ರ ಅವರ ಆಳವಾದ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದರು.
ಬಸವಣ್ಣನವರು ಸಾಮಾನ್ಯ ಮಗುವಿನಂತೆ ಬಾಲ್ಯದ ಚೇಷ್ಟೆಗಳಲ್ಲಿ ತೊಡಗದೆ, ಸಮಾಜದ ಉದ್ಧಾರಕ್ಕಾಗಿಯೇ ಜನ್ಮವೆತ್ತಿದ ಮಹಾನ ಚೇತನ. ಅವರ ಬಾಲ್ಯದಿಂದಲೇ ಕ್ರಾಂತಿಕಾರಿ ಹಾದಿಯ ಮುನ್ಸೂಚನೆ ಇತ್ತು. ನಮ್ಮ ಅಂತರಂಗ ಮತ್ತು ಆತ್ಮರಂಗವನ್ನು ಹೇಗೆ ಬಹಿರಂಗಗೊಳಿಸಿಕೊಳ್ಳಬೇಕು, ಅಂದರೆ ಒಳಗಿನ ಅರಿವನ್ನು ಹೊರಗಿನ ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಬಸವಣ್ಣನವರು ಆಳವಾಗಿ ತಿಳಿದಿದ್ದರು.
ಬಸವಾದಿ ಶರಣರು ಇಡೀ ಬ್ರಹ್ಮಾಂಡವನ್ನೇ ಅಧ್ಯಯನ ಮಾಡಿದ್ದರು. ಈ ಬ್ರಹ್ಮಾಂಡದ ಸಂಕೇತವಾಗಿ ಮತ್ತು ಅದರ ಅರಿವನ್ನು ಸದಾ ಜಾಗೃತವಾಗಿರಿಸಲು ನಮಗೆ ‘ಇಷ್ಟಲಿಂಗ’ವನ್ನು ನೀಡಿದ್ದಾರೆ. ಇಷ್ಟಲಿಂಗ ಧಾರಣೆಯು ಕೇವಲ ಧಾರ್ಮಿಕ ಕ್ರಿಯೆಯಲ್ಲ, ಅದು ಬ್ರಹ್ಮಾಂಡದ ಅರಿವನ್ನು ಅಂಗೈಯಲ್ಲಿ ಹಿಡಿಯುವ ವೈಜ್ಞಾನಿಕ ಹಾದಿಯಾಗಿದೆ. ಅಂದಿನ ಕಾಲದ ಅನಿಷ್ಟ ಪದ್ಧತಿಗಳಾದ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ಕಠಿಣವಾಗಿ ವಿರೋಧಿಸಿದ ಬಸವಣ್ಣನವರು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಂದು ಡಾ. ಗೀತಾ ದಯಣ್ಣವರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಉಪ ಮಹಾಪೌರ ಹನುಮಂತ ಕೊಂಗಾಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಬಸವೇಶ್ವರ ಜಯಂತಿ ಉತ್ಸವ ಸಮಿತಿ ಮುಖ್ಯ ಸಂಚಾಲಕರಾದ ಬಸವರಾಜ ರೊಟ್ಟಿ, ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾಧ್ಯಕ್ಷರಾದ ರತ್ನಪ್ರಭ ಬೆಲ್ಲದ, ಡಾ. ಎಚ್. ಬಿ. ರಾಜಶೇಖರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಲ್ಲಿನ ಸಾಂಸ್ಖೃತಿಕ ನಾಯಕ ಬಸವಣ್ಣನವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತರಾದ ಭೊರಸೆ ಗುಲಾಬರಾವ್ ಭೂಷಣ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನುರ್ವಾಹಕ ಅಧಿಕಾರಿ ರಾಹಿಲ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.