Kannada NewsLatestNationalPolitics

*ಸಚಿವ ನಿತೇಶ್ ರಾಣೆಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಓರ್ವರ ಮೇಲೆ ಕೆಸರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ನಾರಾಯಣ ರಾಣೆ ಅವರಿಗೆ ಕೋರ್ಟ್ 1 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸಿಂಧುದುರ್ಗದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸಚಿವ ನಿತೇಶ್ ರಾಣೆ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ದೋಷಿ ಎಂದು ಘೋಷಿಸಿದ್ದು, 1 ತಿಂಗಳ ಜೈಲು ಶಿಕ್ಷೆಯ ಜೊತೆ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

Home add -Advt

ದಂಡದ ಮೊತ್ತದಲ್ಲಿ 50 ಸಾವಿರ ರೂ.ಗಳನ್ನು ಸಂತ್ರಸ್ತ ಇಂಜಿನಿಯರ್‌ಗೆ ಪರಿಹಾರವಾಗಿ ನೀಡಲು ಆದೇಶಿಸಿದೆ. ಕೋರ್ಟ್ ಈ ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಇದರಿಂದಾಗಿ ನಿತೇಶ್ ರಾಣೆ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಸಿಕ್ಕಿದ್ದು, ಸದ್ಯಕ್ಕೆ ಬಂಧನದಿಂದ ಪಾರಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 29 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಮುಂಬೈ-ಗೋವಾ ಹೆದ್ದಾರಿಯ ಕಂಕಾವ್ಲಿ ಭಾಗದಲ್ಲಿ ರಸ್ತೆಯ ಉದ್ದಕ್ಕೂ ಗುಂಡಿಗಳಿದ್ದವು. ಮಳೆಯಿಂದಾಗಿ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ರಸ್ತೆ ಅಗಲೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿ ನಡೆಯುತ್ತಿದೆ. ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದ ಕಾರಣ ಪ್ರತಿದಿನ ಸಂಚರಿಸುತ್ತಿದ್ದ ಸಾವಿರಾರು ಜನರಿಗೆ ಸಮಸ್ಯೆಯಾಗುತ್ತಿತ್ತು. ದೂರು ನೀಡಿದ್ದರೂ ಸಮಸ್ಯೆ ಪರಿಹಾರ ಮಾಡದ್ದಕ್ಕೆ ಸಿಟ್ಟಾದ ಸಚಿವ ರಾಣೆ 2019 ರಲ್ಲಿ ಅಧಿಕಾರಿಗಳಿಗೆ ಪಾಠ ಕಲಿಸಲು ಬೆಂಬಲಿಗರ ಜೊತೆ ಸೇರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೇಲೆ ಕೆಸರು ಎರಚಿ ಪ್ರತಿಭಟನೆ ನಡೆಸಿದ್ದರು.

https://share.google/TB13neihorhQ3XV4Y

Related Articles

Back to top button