Kannada NewsKarnataka NewsLatest

*ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ನಗ್ನ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ಬಾಡಿಗೆ ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ನಗ್ನ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ ಯುವತಿ ಪೂಜಾ ದತ್ತಾ ಎಂಬಾಕೆಯ ಶವ ಪತ್ತೆಯಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಯುವತಿ ಕಳೆದ ಮೂರು ವರ್ಷಗಳಿಂದ ಇದೇ ಮನೆಯಲ್ಲಿ ವಾಸವಾಗಿದ್ದಳು.

ಯುವತಿಯದ್ದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬುದು ತನಿಖೆ ಬಳಿಕ ತಿಳಿಯಬೇಕಿದೆ. ಆದರೆ ಮೃತ ಪೂಜಾ ವಾಸವಿದ್ದ ಮನೆಯ ಮಾಲೀಕ ಜಾನಕಮ್ಮ ಹೇಳುವ ಪ್ರಕಾರ, ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಆಕೆ ಅವಿವಾಹಿತೆ. ಹೆಚ್ಚಾಗಿ ಹಿಂದಿಯಲ್ಲೇ ಸಂವಹನ ನಡೆಸುತ್ತಿದ್ದಳು. ಆಕೆಯನ್ನು ಭೇಟಿ ಮಾಡಲು ಒಬ್ಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅವನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಕೆಳಗಿಳಿದು ಬಂದಿದ್ದೇ ಪೂಜಾಳನ್ನು ನೋಡಿದ ಕೊನೆಯ ಕ್ಷಣ ಎಂದು ಜಾನಕಮ್ಮ ತಿಳಿಸಿದ್ದಾರೆ. ಏಪ್ರಿಲ್ 27 ರ ಸಂಜೆ ಮನೆಯಿಂದ ತೀವ್ರ ದುರ್ನಾತ ಬರುತ್ತಿದ್ದ ಕಾರಣ, ಪಕ್ಕದ ಮನೆಯ ಯುವಕರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಿದಾಗ, ಪೂಜಾ ಬೆತ್ತಲಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಫ್ಯಾನ್ ಚಾಲನೆಯಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಮುಂದುವರೆದಿದೆ.

https://share.google/RzOZZoE78jqqejpdW


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button