Belagavi NewsBelgaum NewsKannada NewsKarnataka NewsLatest

*ಬ್ಯಾಡ್ ಬಾಯ್ಸ್, ಟಗರು ಬಾಯ್ಸ್…ಹುಚ್ಚಾಟ ಬಿಡಿ; ಬೆಳಗಾವಿಯಲ್ಲಿ ಇರಲು ಗುಡ್ ಬಾಯ್ಸ್ ಆಗಿ: ಎಸ್ಪಿ ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು “ಬ್ಯಾಡ್ ಬಾಯ್ಸ್”, “ಟಗರು ಬಾಯ್ಸ್”, “ಕಿಂಗ್ ಮೇಕರ್” ಎಂಬ ಹೆಸರಿನಲ್ಲಿ ರೌಡಿಶೀಟರ್‌ಗಳು ಮಕ್ಕಳನ್ನು ಬಳಸಿಕೊಂಡು ರೀಲ್ಸ್ ಹಾಗೂ ವಿಡಿಯೋಗಳನ್ನು ಹರಿಬಿಡುತ್ತಿರುವ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇಂಥ ಚಟುವಟಿಕೆಗಳ ವಿರುದ್ಧ ಮುಲ್ಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದರು.

ಸಿನಿಮಾ ನೋಡಿ, ತಲ್ವಾರ್ ಹಿಡಿದು ಕೇಕ್ ಕಟ್ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಗಳು ಸಣ್ಣ ಸಣ್ಣ ಮಕ್ಕಳ ಜೊತೆಗೆ ಸೇರಿ ವಿಡಿಯೋ ಮಾಡಿ ಭಯ ಹುಟ್ಟಿಸುವ 18 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು ಒಂದೂವರೆ ತಿಂಗಳಲ್ಲಿ 18 ಜನರನ್ನು ಗುರಿತಿಸಲಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ರೌಡಿ ಶೀಟರ್ ಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ಅಂಥವರು ಪದೇ ಪದೇ ಕಾನೂನು ಉಲ್ಲಂಘನೆ ಮಾಡಿದರೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.

ಗೋಕಾಕ ಶಹರ ಠಾಣೆ ವ್ಯಾಪ್ತಿಯ ಗಂಗಪ್ಪ ನಾಯಕ, ಸಂಜು ಮೇಸ್ತ್ರಿ 6 ತಿಂಗಳು ಗಡಿಪಾರು, ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯ ಸಾಗರ ಖಾನಾಪುರ, ಪಾಸ್ಕಲ್ ಮುತ್ತುಸ್ವಾಮಿ 6 ತಿಂಗಳು, ಕುಲಗೋಡ ಠಾಣೆ ವ್ಯಾಪ್ತಿಯ ದಸ್ತಗೀರ್ ನವಲಗಿ 8 ತಿಂಗಳು, ಮುರಗೋಡ ಠಾಣೆಯ ಹಣಮಂತ ಮಾದರ 1 ವರ್ಷ, ನೀಲಕಂಠ ಮಣವಾಡಕರ 6 ತಿಂಗಳು, ನಿಪ್ಪಾಣಿ ಶಹರ ಠಾಣೆಯ ಸೈಫಅಲಿ ನಾಗರ್ಜಿ 1 ವರ್ಷ,  ಸಂಕೇಶ್ವರ ಠಾಣೆಯ ಸಚಿನ ಚೌಡಕನ್ನವರ 1 ವರ್ಷ, ನಿಪ್ಪಾಣಿ ಶಹರ ಠಾಣೆಯ ಪ್ರವೀಣ ಚೌಗಲೆ 1 ವರ್ಷ, ನಿಪ್ಪಾಣಿ ಗ್ರಾಮೀಣ ಚಂದ್ರಕಾಂತ ವಡ್ಡರ 1 ವರ್ಷ,  ಯಮಕನಮರಡಿ ಲಾಡಜಿಸಾಬ್ ಮುಲ್ತಾನಿ, ಪಾರೀಶ ನಾಶಿಪುಡಿ 8 ತಿಂಗಳು ಗಡಿಪಾರು, ಕಟಕೋಳ ಠಾಣೆಯ ಚೇತನ ನಾಯ್ಕರ 3 ತಿಂಗಳು, ಸವದತ್ತಿ ಠಾಣೆ ವ್ಯಾಪ್ತಿಯ ಹುಸೇನಸಾಬ್ ಬೀಳಗಿ 2 ತಿಂಗಳು, ಸುರೇಬಾನ ಪೊಲೀಸ್ ಠಾಣೆಯ ಚುರಪ್ಪ ಘಟ್ಟೂರ 1 ತಿಂಗಳು, ಕಿತ್ತೂರ ಪೊಲೀಸ್ ಠಾಣೆಯ ದೀಪಕ ಕೆಳಗಡೆ 6 ತಿಂಗಳು, ಕುಮಾರ ಬೆಂಡಿಗೇರಿ 7 ತಿಂಗಳು ಎಂಬುವರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ.

Home add -Advt

ಬೆಳಗಾವಿ ಜಿಲ್ಲೆಯಲ್ಲಿ ಸರಿಯಾಗಿ ಬದುಕಬೇಕಾದರೆ ಎಲ್ಲರೂ ‘ಗುಡ್ ಬಾಯ್ಸ್’ ಆಗಿರಬೇಕು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಲು ಮಕ್ಕಳನ್ನು ಬಳಸಿಕೊಂಡು ರೌಡಿಸಂ ಪ್ರದರ್ಶಿಸುತ್ತಿರುವುದು ಸಹಿಸಲ್ಲ ಎಂದು ಎಚ್ಚರಿಸಿದರು.

ಆದೇಶ ಪಾಲಿಸದಿದ್ದರೆ ಸಂಬಂಧಪಟ್ಟ ರೌಡಿಶೀಟರ್‌ಗಳ ವಿರುದ್ಧ ಗಡಿಪಾರು ಕ್ರಮ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳ ನಿಗಾ ವಹಿಸಲಾಗಿದೆ.

ಪೊಲೀಸ್ ಇಲಾಖೆ ಇಂಥ ಪ್ರಕರಣಗಳ ಮೇಲೆ ನಿಗಾ ಇಟ್ಟಿದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಷಕರು ಕೂಡ ಮಕ್ಕಳನ್ನು ಇಂಥ ಚಟುವಟಿಕೆಗಳಿಂದ ದೂರವಿಡಬೇಕು ಎಂದರು.

Related Articles

Back to top button