*ಜನರು ಸರ್ಕಾರವನ್ನು ಹುಡುಕಬಾರದು; ಸರ್ಕಾರವೇ ಜನರ ಬಳಿಗೆ ಹೋಗಬೇಕು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್*

ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಎಚ್ಚರದಲ್ಲಿ ಕೆಲಸ ಮಾಡಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
ನಾವು ಎರಡು ಕಣ್ಣಲ್ಲಿ ನೂರು ಜನರನ್ನು ನೋಡಿದರೆ, ನೂರು ಜನರ ಇನ್ನೂರು ಕಣ್ಣುಗಳು ನಮ್ಮನ್ನು ಗಮನಿಸುತ್ತಿರುತ್ತವೆ
ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆರಂಭದಲ್ಲಿ ಅಧಿಕಾರಿಗಳಿಗೆ ಕೊಟ್ಟ ಸಲಹೆ ಸೂಚನೆಗಳು
ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನಾದೇಶಕ್ಕಾಗಿ ಜನರ ಬಳಿಕೆ ಹೋಗಬೇಕು. ಅಧಿಕಾರಿಗಳಿಗೆ ಇದರ ಅಗತ್ಯ ಇರುವುದಿಲ್ಲ. ಹಾಗಂಥಾ ಅಧಿಕಾರಿಗಳು ಮೈ ಮರೆತರೆ, ಕರ್ತವ್ಯ ಮರೆತರೆ ಅದು ಜನತೆಗೆ ಬಗೆಯುವ ದ್ರೋಹವಾಗುತ್ತದೆ. ಅಧಿಕಾರಿ ವರ್ಗ ತಮ್ಮ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಿರೀಕ್ಷೆ ಈಡೇರಿದಂತಾಗುತ್ತದೆ
ಸಭೆಯ ನಡುವೆ ಯಾವುದೇ ಅಧಿಕಾರಿ ಮೊಬೈಲ್ ನಲ್ಲಿ ಮಾತಾಡುವುದು ಕಂಡು ಬಂದರೆ ಸಂಜೆ ಮೀಟಿಂಗ್ ಮುಗಿಯುವ ವೇಳೆಗೆ ನಿಮ್ಮ ಅಮಾನತು ಆದೇಶ ಬರುತ್ತದೆ. ಈ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೇ ನೆಲೆಸಬೇಕು. ಹಾಗಾದಾಗ ಮಾತ್ರ ನೀವು ಜನರ ಕೈಗೆ ಸಿಗಲು, ಅವರಿಗೆ ಸ್ಪಂದಿಸಲು ನೆರವಾಗುತ್ತದೆ.
ಸುಖಾ ಸುಮ್ಮನೆ ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ.
ನಿಮ್ಮ ಹಂತದಲ್ಲೇ ಕೆಲಸ ಸರಾಗವಾಗಿ ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಜನತೆ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.
ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ತಮ್ಮ ಅಧೀನ ಅಧಿಕಾರಿಗಳ ಮಾಹಿತಿ ಅಂಗೈ ತುದಿಯಲ್ಲಿ ಇರಬೇಕು. ಯಾವ ಯಾವ ಅಧಿಕಾರಿ ಫೀಲ್ಡ್ ವರ್ಕ್‌ಗೆ ಹೋಗಿದ್ದಾರೆ, ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಜನರ ಬಳಿಗೆ ಹೋಗಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ ಎನ್ನುವ ನಿತ್ಯದ ಅಪ್‌ಡೇಟ್ ನಿಮ್ಮ ಬಳಿ ಇರಬೇಕು. ಈ ರೀತಿಯ ಒಂದು ರಿಜಿಸ್ಟರ್ ನಿರ್ವಹಣೆ ಮಾಡುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿ
ನಮ್ಮ ಸರ್ಕಾರ ಕ್ರಾಂತಿಕಾರಕ ರೀತಿಯಲ್ಲಿ ಜನರ ಸಮಸ್ಯೆ ಬಗೆಹರಿಸಲು “ಪ್ರಜಾಸೇವಾ ಇಲಾಖೆ”ಯನ್ನು ಸ್ಥಾಪಿಸಿದ್ದೇವೆ. ಶಾಸಕರು, ಜಿಲ್ಲಾ ಮಂತ್ರಿಗಳು, ಅಧಿಕಾರಿಗಳು ನಿಯಮಿತವಾಗಿ ಜನರ ಬಳಿಗೆ ಹೋಗಬೇಕು. ನಾನು ನಿರಂತರವಾಗಿ ಜನ ಸ್ಪಂದನೆ ಕಾರ್ಯಕ್ರಮಗಳನ್ನು ನಡೆಸುತ್ತೇನೆ. ನೀವೂ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಪ್ರಜಾಸೇವೆ ಇಲಾಖೆಯ ಗೈಡ್ ಲೈನ್ಸ್‌ಗಳನ್ನು ಸರಿಯಾಗಿ ಜಾರಿ ಮಾಡಬೇಕು. ಈ ವಿಚಾರದಲ್ಲಿ ನಾನು ಉದಾಸೀನ, ದೌರ್ಜನ್ಯ ಸಹಿಸಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕೊಡಲು ಸಾಧ್ಯವಿರುವುದನ್ನು ತಪ್ಪದೇ ನೀಡಬೇಕು. ಜನ ಜಿಲ್ಲಾ ಕೇಂದ್ರ, ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಿ
ಅವೈಜ್ಞಾನಿಕವಾಗಿ ನಗರಗಳು, ಪಟ್ಟಣಗಳು ಬೆಳೆಯುವುದನ್ನು ತಪ್ಪಿಸಿ ಶಿಸ್ತುಬದ್ದವಾದ, ಯೋಜನಾಬದ್ದವಾದ ನಗರಗಳು, ಪಟ್ಟಣಗಳ ಬೆಳವಣಿಗೆಗೆ ಪೂರಕವಾಗಿ ನಾವು ಕೆಲವು ಬದಲಾವಣೆಗಳನ್ನು ತರುತ್ತೇವೆ. ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳುವ ನಮ್ಮ ತೀರ್ಮಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜಾರಿಗೆ ತನ್ನಿ
ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಯೋಜನಾಬದ್ದ ಬೆಳವಣಿಗೆ ಆಗಬೇಕು. ಅನುಮತಿ ಪಡೆಯದೆ ಯಾರೂ ಬಡವಾವಣೆಗಳನ್ನು ನಿರ್ಮಿಸಲು ಅವಕಾಶ ಇರಬಾರದು
ಇಡೀ ದೇಶದಲ್ಲಿ ಕ್ರಾಂತಿಕಾರವಾಗಿ ಕಂದಾಯ ಇಲಾಖೆಯಲ್ಲಿ ಬದಲಾವಣೆ ತಂದಿದ್ದೇವೆ. ಯಾರೂ ಕೂಡ ಒಂದು ಪೈಸೆ ಕರ್ಚಿಲ್ಲದಂತೆ ಅವರ ಆಸ್ತಿಗೆ ಇ-ಖಾತೆ ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಬೆಂಗಳೂರಿನ ಬಳಿಕ ಇಡೀ ರಾಜ್ಯಕ್ಕೆ ಇದು ವಿಸ್ತರಣೆ ಆಗುತ್ತಿದೆ. ನಮ್ಮ ಸರ್ಕಾರದ ಈ ಕ್ರಾಂತಿಕಾರಕ ಯೋಜನೆ ಅಷ್ಟೇ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಜಾರಿ ಆಗಬೇಕು
ಶಿಕ್ಷಣ ಇಲಾಖೆಯಲ್ಲೂ ಇದೇ ರೀತಿಯ ಮತ್ತೊಂದು ಕ್ರಾಂತಿಕಾರಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಸಿಎಸ್‌ಆರ್ ಶಾಲೆಗಳನ್ನು ನಾವು ಆರಂಭಿಸುತ್ತಿದ್ದೇವೆ. ಕೆಪಿಎಸ್ ಶಾಲೆಗಳ ಮಾದರಿಯಲ್ಲಿ ಸಿಎಸ್‌ಆರ್ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿದ್ದೇವೆ. ಗ್ರಾಮಾಂತರ ಭಾಗದಲ್ಲೂ ಉತ್ತಮ ಗುಣಮಟ್ಟದ ಶಾಲೆಗಳು ಅವರ ಏರಿಯಾದಲ್ಲೇ ಇರಬೇಕು ಎನ್ನುವುದು ನನ್ನ ಆಲೋಚನೆಯಾಗಿದೆ. ಇದಕ್ಕಾಗಿ ಎಲ್ಲಾ ಉದ್ಯಮಿಗಳನ್ನು ನಾನು ಕರೆಸಿ ಮಾತುಕತೆ ನಡೆಸುತ್ತಿದ್ದೇನೆ
ಪ್ರಾಥಮಿಕ ಹಂತದಿಂದಲೇ ನನ್ನ ಕ್ಷೇತ್ರದಲ್ಲಿ ನಾನು ಈ ಪ್ರಯೋಗ ಮಾಡಿ ಯಶಸ್ವಿ ಆಗಿದೆ. ೨೦ ಶಾಲೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಇದು ಪರಿಣಾಮಕಾರಿಯಾಗಿ ೧೦-೨೦ ಶಾಲೆಗಳು ಸ್ಥಾಫನೆ ಆಗಬೇಕು ಎನ್ನುವುದು ನನ್ನ ಗುರಿಯಾಗಿದೆ. ನೀವುಗಳು ನನ್ನ ಗುರಿಗಳ ಜೊತೆಗೆ ಹೆಜ್ಜೆ ಹಾಕಿ
ಎಸ್‌ಐಆರ್ ವಿಚಾರದಲ್ಲಿ ನಾವು ರಾಜಕಾರಣ ಮಾಡಬಾರದು. ರಾಜ್ಯ ಚುನಾವಣಾಧಿಕಾರಿಗಳು ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಕಾರ್ಯಯೋಜನೆಗೆ ನಾವು ಪೂರಕವಾಗಿ ನೆರವು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಮತದಾನದ ಹಕ್ಕು ಉಳಿಯಬೇಕು. ಇದಕ್ಕೆ ಪೂರಕವಾಗಿ ಯಾರ್ಯಾರಿಗೆ ಯಾವ ಯಾವ ದಾಖಲೆಗಳ ಅಗತ್ಯವಿದೆಯೋ ಅದನ್ನೆಲ್ಲಾ ನಮ್ಮ ಸರ್ಕಾರ ಒದಗಿಸಬೇಕು. ಅಧಿಕಾರಿಗಳು ಗಮನಿಸಬೇಕು. ಮುಖ್ಯವಾಗಿ ಪ್ರತೀ ಮನೆಗೆ ಮೂರು ಬಾರಿ ಬಿಎಲ್‌ಒಗಳು ಭೇಟಿ ನೀಡಿ ಅರ್ಜಿಯನ್ನು ಒದಗಿಸಬೇಕು
ಯಾರ ಮತದಾನದ ಹಕ್ಕು ಉಳಿಯುತ್ತದೋ ಅವರಿಗೆ ಸರ್ಕಾರದ ಸವಲತ್ತುಗಳು ಸಿಗುತ್ತವೆ. ಮತದಾರನೇ ಅಲ್ಲದವನಿಗೆ ಸವಲತ್ತುಗಳು ಸಿಗುವುದಿಲ್ಲ. ಆದ್ದರಿಂದ ನಾವು ಹೆಲ್ಪ್ ಡೆಸ್ಕ್‌ಗಳನ್ನು ಪ್ರತೀ ವಾರ್ಡ್‌ಗಳು ಮತ್ತು ಏರಿಯಾಗಳಲ್ಲಿ ತೆರೆಯುತ್ತಿದ್ದೇವೆ. ಇದರ ಸದುಪಯೋಗ ಪಡಿಸಿಕೊಳ್ಳಿ. ಒಬ್ಬೇ ಒಬ್ಬ ಮತದಾರನ ಹಕ್ಕು ಕಳೆದುಹೋಗಬಾರದು. ಇದು ನಮ್ಮ ಸರ್ಕಾರದ ಉದ್ದೇಶ
ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಹಲವು ಯೋಜನೆಗಳನ್ನು ಘೋಷಿಸಿದ್ದೇನೆ. ಹಾಗೆಯೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನೂ ಘೋಷಿಸಿದ್ದೇನೆ. ಈ ಎಲ್ಲಾ ಘೋಷಣೆಗಳೂ ಕಾರ್ಯಕ್ರಮಗಳಾಗಿ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಬೇಕು. ಇದಕ್ಕಾಗಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು
*ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನೂ ತೆರೆಯಲು ನಾವು ತೀರ್ಮಾನಿಸಿದ್ದೇವೆ. ಇದಕ್ಕೆ “ಯುವ ಉದ್ಯೋಗ ಸೇತು” ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಖಾಸಗಿ ಕ್ಷೇತ್ರದ ಉದ್ಯೋಗಗಳ ಬಗ್ಗೆಯೂ ಮಾಹಿತಿ ವಿದ್ಯಾರ್ಥಿ ಯುವ ಜನರಿಗೆ ಸಿಗಲಿದೆ”
ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ನಾಡಗೀತೆಯಲ್ಲಿರುವ ಆಶಯಗಳು ಮತ್ತು ಸಂವಿಧಾನಬದ್ದ ಮೌಲ್ಯಗಳು ಪ್ರತಿಯೊಬ್ಬರ ಮನೆ-ಮನ ತಲುಪಲು ಪೂರಕವಾಗಿ ಸೌಹಾರ್ಧಯುತ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ರಾಜ್ಯದಲ್ಲಿ ಹತ್ತು ಸಾವಿರ “ಭಾರತ್ ಜೋಡೋ ಯುವ ಸಂಘ”ಗಳನ್ನು ತೆರೆಯುತ್ತಿದ್ದೇವೆ. ಪ್ರತೀ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ಅನುದಾನ ಕೊಡುತ್ತಿದ್ದೇವೆ”
ರಾಜ್ಯದಾದ್ಯಂತ ಕಂದಾಯ ಇಲಾಖೆ ಭೂಮಿ ಎಲ್ಲೆಲ್ಲಿದೆಯೋ ಅದೆಲ್ಲದರ ಆಡಿಟಿಂಗ್ ಆಗಲಿದೆ. ನಿವೇಶನ ರಹಿತ ಎಲ್ಲಾ ಬಡವರಿಗೂ ನಿವೇಶನ ಕೊಡುವುದನ್ನು ಕಡ್ಡಾಯವಾಗಿ ಜಾರಿಯಾಗಬೇಕು. ಇದಕ್ಕೆ ಒಂದು ಸ್ಪಷ್ಟವಾದ ಯೋಜನೆ ರೂಪಿಸುತ್ತಿದ್ದೇವೆ. ನೀವೆಲ್ಲರೂ ಕಂದಾಯ ಭೂಮಿ ಎಲ್ಲೆಲ್ಲಿದೆಯೋ ಅವುಗಳ ಬಗ್ಗೆ ಸ್ಪಷ್ಟ ದಾಖಲೆ, ವಿವರಗಳನ್ನು ಸಂಗ್ರಹಿಸಿ ಕಳುಹಿಸಬೇಕು
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಬದಲಾಗಿ ಸರ್ಕಾರವೇ ಜನರ ಮನೆಬಾಗಿಲಿಗೆ ತಲುಪಿ ಸೇವೆ ನೀಡಬೇಕು ಎಂಬುದು ತಮ್ಮ ಆಡಳಿತದ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಕಾರ್ಯನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳ ಹಾಜರಾತಿ ಹಾಗೂ ಚಲನವಲನದ ಮೇಲೂ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಜಾಸೇವಾ ಇಲಾಖೆ ಸ್ಥಾಪನೆ
ಜನರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಪ್ರತ್ಯೇಕ ಪ್ರಜಾಸೇವಾ ಇಲಾಖೆ ಸ್ಥಾಪಿಸಲಾಗಿದ್ದು, ಈ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಆಯ್ದ ತಾಲ್ಲೂಕುಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಪರಿಹರಿಸುವ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದರು.
ಸಿ.ಎಸ್.ಆರ್. ನಿಧಿಯಿಂದ 2,000 ಸರ್ಕಾರಿ ಶಾಲೆಗಳು
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸಿ.ಎಸ್.ಆರ್. ನಿಧಿಯನ್ನು ಬಳಸಿಕೊಂಡು ಸುಮಾರು 2,000 ಆಧುನಿಕ ಸರ್ಕಾರಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ಮೂರು ಗ್ರಾಮ ಪಂಚಾಯಿತಿಗಳಿಗೆ ಒಂದು ಶಾಲೆಯ ಮಾದರಿಯಲ್ಲಿ 10 ರಿಂದ 15 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳನ್ನು ನಿರ್ಮಿಸಲಾಗುವುದು. ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು ತಲಾ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮತದಾನದ ಹಕ್ಕು ಎಲ್ಲರಿಗೂ
ಅರ್ಹ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ದೊರೆಯಬೇಕು ಎಂಬುದು ಸರ್ಕಾರದ ಬದ್ಧತೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಸಂಗ್ರಹಿಸಬೇಕು. ಜಾತಿ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.
‘ಭಾರತ ಜೋಡೋ ಯುವಕ ಸಂಘ’ ಯೋಜನೆ
ಯುವಜನರಲ್ಲಿ ರಾಷ್ಟ್ರೀಯ ಐಕ್ಯತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯದಾದ್ಯಂತ 10 ಸಾವಿರ ‘ಭಾರತ ಜೋಡೋ ಯುವಕ ಸಂಘ’ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 1,000 ಕೋಟಿ ರೂ. ಮೀಸಲಿಡಲಾಗಿದ್ದು, ಪ್ರತಿ ಸಂಘಕ್ಕೆ 10 ಲಕ್ಷ ರೂ. ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಪ್ರತಿ ಕ್ಷೇತ್ರದಲ್ಲಿ ನಿವೇಶನ, ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕಾ ಪಾರ್ಕ್
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ಐದು ಸಾವಿರದಿಂದ ಹತ್ತು ಸಾವಿರ ನಿವೇಶನಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ನಕಲಿ ಸುದ್ದಿಗೆ ಕಡಿವಾಣ
ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಕಲಿ ಸುದ್ದಿಗಳನ್ನು ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಳೆ ಕೊರತೆ; ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ಡಾ.ಜಿ. ಪರಮೇಶ್ವರ್
ಸಭೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಶೇ.17ರಷ್ಟು ಕಡಿಮೆಯಾಗಿದ್ದು, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್‌ಗಳು ನಿಯಮಿತ ಸಭೆ ನಡೆಸಿ ಪರಿಸ್ಥಿತಿಯನ್ನು ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಸೂಚಿಸಿದರು.
ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಮೇವಿನ ಕೊರತೆ ಇರುವ ಪ್ರದೇಶಗಳಲ್ಲಿ ರೈತರಿಗೆ ಮೇವಿನ ಕಿಟ್ ವಿತರಿಸಬೇಕು ಎಂದರು.
ಕೇಂದ್ರ ಸರ್ಕಾರ ಇದುವರೆಗೆ ಅಗತ್ಯ ಗೊಬ್ಬರದ ಶೇ.50ರಷ್ಟು ಮಾತ್ರ ಪೂರೈಕೆ ಮಾಡಿದ್ದು, ಉಳಿದ ಪ್ರಮಾಣವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆಯು ಮನೆ ಮನೆಗೆ ತೆರಳಿ ಹಕ್ಕುಪತ್ರ ವಿತರಿಸುವ ಅಭಿಯಾನ ಆರಂಭಿಸಿದ್ದು, ರಾಜ್ಯದ ಜಮೀನು ದಾಖಲೆಗಳ ಸುಮಾರು 140 ಕೋಟಿ ಪುಟಗಳನ್ನು ಡಿಜಿಟಲೀಕರಣ ಮಾಡುವ ಮಹತ್ವಾಕಾಂಕ್ಷಿ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಯು.ಟಿ. ಖಾದರ್, ಈಶ್ವರ ಖಂಡ್ರೆ, ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


