Belagavi NewsBelgaum NewsKarnataka NewsLatest

*ಪಂಡರಪುರ ದಿಂಡಿ ಪಾದಯಾತ್ರೆಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಆಷಾಢ ಏಕಾದಶಿ ಅಂಗವಾಗಿ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಗುರುವಾರ ಆಯೋಜಿಸಲಾದ ಶ್ರೀ ವಿಠ್ಠಲ–ರುಕ್ಮಾಯಿ ಪಂಡರಪುರ ದಿಂಡಿ ಪಾದಯಾತ್ರೆಗೆ ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಶುಭಾಶಯ ಕೋರಿದರು.

Home add -Advt


ಶ್ರೀ ವಿಠ್ಠಲ ಮತ್ತು ರುಕ್ಮಾಯಿ ದೇವಿಯ ಭಜನೆ, ನಾಮಸ್ಮರಣೆ ಹಾಗೂ ಭಕ್ತಿಗೀತೆಗಳ ನಡುವೆ ಆರಂಭವಾದ ಪಾದಯಾತ್ರೆಯಲ್ಲಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಂಪ್ರದಾಯಬದ್ಧ ವೇಷಭೂಷಣ ಧರಿಸಿದ್ದ ವಾರ್ಕರಿ ಭಕ್ತರು “ವಿಠ್ಠಲ ವಿಠ್ಠಲ” ಎಂಬ ನಾಮಘೋಷದೊಂದಿಗೆ ಸಾಗಿದ ದೃಶ್ಯ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಆಷಾಢ ಏಕಾದಶಿಯು ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಮಾನವೀಯ ಮೌಲ್ಯಗಳು ಹಾಗೂ ಏಕತೆಯ ಸಂದೇಶವನ್ನು ಸಾರುತ್ತವೆ ಎಂದು ಹೇಳಿದರು. ಪಂಡರಪುರ ದಿಂಡಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಭಕ್ತರಿಗೆ ಶ್ರೀ ವಿಠ್ಠಲನ ಆಶೀರ್ವಾದ ಸದಾ ಇರಲಿ ಎಂದು ಅವರು ಹಾರೈಸಿದರು.


ಸಾಂಬ್ರಾ ಗ್ರಾಮದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತಿಭಾವದಿಂದ ನಡೆಯುತ್ತಿರುವ ಈ ದಿಂಡಿ ಪಾದಯಾತ್ರೆಯು ಸ್ಥಳೀಯರ ಧಾರ್ಮಿಕ ಸಂಪ್ರದಾಯದ ಪ್ರತೀಕವಾಗಿದ್ದು, ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ನಾಗೇಶ್ ದೇಸಾಯಿ, ಮನೋಹರ್ ಬೆಳಗಾಂವ್ಕರ್, ವಾರ್ಕರಿ ಸಂತರು, ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button