ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಲ್ಲಾ 17 ಜನರಿಗೂ ಸಚಿವ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ನಮಗೆ ಅವರ ಮೇಲೆ ನಂಬಿಕೆಯಿದೆ ಎಂದು ಹಿರೆಕೇರೂರು ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಕೊಂಚ ಬೇಸರವಿದೆ. ಈ ಬಗ್ಗೆ ಹೈಕಮಾಂಡ್ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ. 17 ಜನರಿಗೂ ಅಧಿಕಾರ ಕೊಡುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ಈಗ ದಾವೋಸ್ನಿಂದ ಸಿಎಂ ಬಂದ ನಂತರ ಅವರೆ ಸ್ಪಷ್ಟತೆ ಕೊಡುತ್ತಾರೆ. ನಮಗೆ ಅವರ ಮೇಲೆ ವಿಶ್ವಾಸವಿದೆ ಎಂದರು.
ಸಂಪುಟ ವಿಸ್ತರಣೆ ತಡವಾಗುತ್ತಿರುವ ಬಗ್ಗೆ ನಮಗಿಂತ ಹೆಚ್ಚು ರಾಜ್ಯದ ಜನತೆಗೆ ನೋವಾಗಿದೆ. 16, 17 ಜನ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ. ಆಡಳಿತ ಯಂತ್ರಕ್ಕೆ ಚುರುಕು ಮಾಡಬೇಕಿದೆ. ಹೀಗಾಗಿ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕು. ಯಡಿಯೂರಪ್ಪ ಅವರು ಬಂದ ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ ಅನ್ನೋ ವಿಶ್ವಾಸ ಇದೆ.
ನಾವು ಯಾರೂ ಅಮಿತ್ ಶಾ ಅವರ ಜೊತೆ ನೇರವಾಗಿ ಚರ್ಚೆ ಮಾಡಲು ಆಗಲ್ಲ. ಅದಕ್ಕೆ ಬೇರೆ ರೀತಿಯ ಹಂತ ಇರುತ್ತೆ. ರಾಜ್ಯ ಬಿಜೆಪಿ ಅಧ್ಯಕ್ಷರ ಜೊತೆ ಸಿಎಂ ಯಡಿಯೂರಪ್ಪ ಚರ್ಚೆ ಮಾಡುತ್ತಾರೆ ಎಂದು ಹೇಳಿದರು. ಈಗ ಜೆಪಿ ನಡ್ಡಾ ಅವರು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿ ಅವರಿಗಿರುತ್ತದೆ ಎಂದರು.
ಇದೇ ವೇಳೆ ಮಂಗಳೂರು ಬಾಂಬ್ ಪತ್ತೆ ಪ್ರಕರಣವನ್ನು ಹೆಚ್.ಡಿ.ಕುಮಾರಸ್ವಾಮಿ ಅಣಕು ಪ್ರದರ್ಶನ ಎಂದು ಹೇಳಿರುವುದು ತುಂಬಾ ಬಾಲೀಶವಾದ ಹೇಳಿಕೆ. ರಾಜಕೀಯಕ್ಕಾಗಿ ಪೊಲೀಸರ ಕಾರ್ಯ ವೈಖರಿಯನ್ನು ಅಳೆಯೋ ಕೆಲಸ ಮಾಡಬಾರದು. ಮಾಜಿ ಪ್ರಧಾನಿಗಳ ಮಕ್ಕಳಾದವರು, ಸಿಎಂ ಆಗಿದ್ದವರು ಜವಾಬ್ದಾರಿಯುತ ಹೇಳಿಕೆ ನೀಡಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ