
ಪ್ರಗತಿವಾಹಿನಿ ಸುದ್ದಿ: ನಿನ್ನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣ ನಿಮ್ಮನ್ನು ಯಾಕೆ ಇಷ್ಟು ವಿಚಲಿತಗೊಳಿಸಿದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಇಷ್ಟಕ್ಕೂ ಪ್ರಧಾನಿ ಮೋದಿ ಅವರು ನಿನ್ನೆ ಹೇಳಿದ್ದರಲ್ಲಿ ಹೊಸತೇನೂ ಇಲ್ಲ. ಅಧಿಕಾರ ಹಂಚಿಕೆಯ ನಿರಂತರ ಸರ್ಕಸ್ ಮತ್ತು ನಿಮ್ಮ ಸರ್ಕಾರದ ಒಳಜಗಳದಿಂದ ಕಂಗೆಟ್ಟಿರುವ 7 ಕೋಟಿ ಕನ್ನಡಿಗರ ಅಂತರಾಳದ ಧ್ವನಿಯನ್ನೇ ಪ್ರಧಾನಿಗಳು ಪ್ರತಿಧ್ವನಿಸಿದ್ದಾರೆ. ಆ ಸತ್ಯವೇ ಇಂದು ನಿಮಗೆ ನುಂಗಲಾರದ ತುತ್ತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.
ಮೇಲಾಗಿ, ನಿನ್ನೆ ಎಚ್.ಎ.ಎಲ್ ವಿಮಾನ ನಿಲ್ದಾಣದ ಬಳಿ ನಡೆದದ್ದು ಸರ್ಕಾರಿ ಕಾರ್ಯಕ್ರಮವಲ್ಲ. ಅದು ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ನಮ್ಮ ಪಕ್ಷದ ಐತಿಹಾಸಿಕ ವಿಜಯದ ಹಿನ್ನೆಲೆಯಲ್ಲಿ ನಮ್ಮ ಲಕ್ಷಾಂತರ ಕಾರ್ಯಕರ್ತರು ಅಭಿಮಾನಪೂರ್ವಕವಾಗಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಕಾರ್ಯಕ್ರಮ. ಒಂದು ರಾಜಕೀಯ ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ಮತ್ತು ವಿರೋಧ ಪಕ್ಷಗಳ ವೈಫಲ್ಯಗಳ ಬಗ್ಗೆ ಟೀಕೆ ಮಾಡುವ ಸಂಪೂರ್ಣ ಪ್ರಜಾಸತ್ತಾತ್ಮಕ ಹಕ್ಕು ಪ್ರಧಾನ ಮಂತ್ರಿಗಳಿಗಿದೆ.
ಇಷ್ಟಕ್ಕೂ ಶಿಷ್ಟಾಚಾರ, ಘನತೆ ಮತ್ತು ಗೌರವದ ಬಗ್ಗೆ ನೀವು ಇತರರಿಗೆ ಉಪದೇಶ ನೀಡುವುದು ನೋಡಿದರೆ ಎಂತಹವರಿಗೂ ಅಚ್ಚರಿಯಾಗುತ್ತದೆ, ನಗು ಬರುತ್ತದೆ. ಬಜೆಟ್ ಭಾಷಣವನ್ನೂ ರಾಜಕೀಯಕ್ಕೆ ಬಳಸುವ, ರಾಜ್ಯಪಾಲರ ಭಾಷಣವನ್ನು ಕಾಂಗ್ರೆಸ್ ಪಕ್ಷದ ಚುನಾವಣಾ pamphlet ನಂತೆ ದುರ್ಬಳಕೆ ಮಾಡುವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡುವ ಸಿದ್ದರಾಮಯ್ಯನವರೇ ಇಂದು ಸಂಸದೀಯ ಮೌಲ್ಯಗಳ ಬಗ್ಗೆ, ಶಿಷ್ಟರಚಾರದ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ.
ಪ್ರಧಾನಿ ಮೋದಿಯವರ ಮಾತಿಗೆ ಆಕ್ರೋಶ ವ್ಯಕ್ತಪಡಿಸುವ ಬದಲು, ಕರ್ನಾಟಕದ ಜನತೆಯನ್ನು ಕಾಡುತ್ತಿರುವ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
- ಸಿಎಂ ಕುರ್ಚಿಯ ಚೌಕಾಸಿಯಿಂದಾಗಿ ನಿಮ್ಮ ಸರ್ಕಾರ ಸ್ತಬ್ಧವಾಗಿ ನಿಸ್ಕ್ರಿಯವಾಗಿರುವುದು ಸುಳ್ಳೇ?
- ಅಧಿಕಾರಕ್ಕಾಗಿ ನಿಮ್ಮ ಪಕ್ಷದ ನಾಯಕರು ನಿರಂತರವಾಗಿ ಹಾದಿ ಬೀದಿಯಲ್ಲಿ ಕಿತ್ತಾಡುತ್ತಿರುವುದು, ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿರುವುದು ಸುಳ್ಳೇ?
- ಬಣ ರಾಜಕೀಯದ ಮಧ್ಯೆ ಆಡಳಿತ, ಅಭಿವೃದ್ಧಿ ಹಳ್ಳ ಹಿಡಿದಿರುವುದು ಸುಳ್ಳೇ?
ಪ್ರಧಾನಿ ಮೋದಿ ಅವರು ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಏಳೂವರೆ ಕೋಟಿ ಕನ್ನಡಿಗರ ಆಕ್ರೋಶಕ್ಕೆ ದನಿಗೂಡಿಸಿದ್ದಾರೆ. ಆ ಸತ್ಯದ ಬಿಸಿ ನಿಮಗಿಂದು ತಟ್ಟುತ್ತಿದೆ. ಸತ್ಯ ಎಂದಿನಂತೆ ನಿಮ್ಮನ್ನ ಸಹಜವಾಗಿ ವಿಚಲಿತಗೊಳಿಸಿದೆ ಎಂದು ಟೀಕಿಸಿದ್ದಾರೆ.




