*ಆನ್ ಲೈನ್ ವಂಚನೆ: 19.50 ಲಕ್ಷ ರೂ ಕಳೆದುಕೊಂಡ ಬೆಳಗಾವಿ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಆನ್ ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೊಬ್ಬರೊ 19.50 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಭೂಷಣ ಪಾಟೀಲ ವಂಚನೆಗೊಳಗಾದವರು. ಭೂಷಣ ಅವರು ಮೊಬೈಲ್ ಸಂಖ್ಯೆಯನ್ನು ಡಿ85 ಅಷ್ಟಾ ಟ್ರೇಡ್ ಮಾರ್ಕೆಟ್ ಥಿಂಕಿಂಗ್ ಅಲಾಯನ್ಸ್ ” ಎಂಬ ವಾಟ್ಸ್ಆಪ್ ಗ್ರೂಪ್ಗೆ ಸೇರಿಸಿದ್ದರು.
ಆ ಗ್ರೂಪ್ನಲ್ಲಿ ಷೇರು ಮಾರುಕಟ್ಟೆ ಮತ್ತು ಐಪಿಒ ಗಳಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವಂತೆ ಸೂಚಿಸಿದ್ದಲ್ಲದೇ, ಆರೋಪಿಗಳು ಆ್ಯಪ್ನಲ್ಲಿ ಹೂಡಿಕೆ ಮಾಡಿದ ಹಣ ಹಾಗೂ ಲಾಭದ ಮೊತ್ತ ತೋರಿಸಿದ್ದರು.
ಅದನ್ನು ಭೂಷಣ ಅವರು, 2025ರ ಅಕ್ಟೋಬರ್ ತಿಂಗಳಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 19.50 ರೂ ಲಕ್ಷ ಹಣವನ್ನು ಆರೋಪಿಗಳು ತಿಳಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಆದರೆ, ಅಲ್ಲಿಂದ ಈ ವರೆಗೂ ಹೂಡಿಕೆಯ ಮೂಲ ಹಣ ಹಾಗೂ ಲಾಭದ ಮೊತ್ತವನ್ನು ಮರಳಿ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


