
ಪ್ರಗತಿವಾಹಿನಿ ಸುದ್ದಿ: ಸೋಮವಾರ ರಾತ್ರಿ ಭೀಕರ ರೈಲು ಅಪಘಾತವೊಂದು ಸಂಭವಿಸಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ಮತ್ತು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಉತ್ತರಾಖಂಡದ ಋಷಿಕೇಶ ಖಾಂಡ್ ಗಾಂವ್ ಪ್ರದೇಶದ ಯೋಗ ನಗರಿ ರೈಲು ನಿಲ್ದಾಣದ ಬಳಿ ಉಜ್ಜಿಯಿನಿ ಎಕ್ಸ್ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿವೆ.
ಸೋಮವಾರ ರಾತ್ರಿ ವೇಳೆಗೆ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ತಕ್ಷಣವೇ ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ರೈಲು ಹಳಿತಪ್ಪಿದ ಸಮಯದಲ್ಲಿ ಬೋಗಿಗಳಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ರೈಲು ಖಾಲಿಯಿದ್ದ ಕಾರಣ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ದಿನನಿತ್ಯದ ಸಾಮಾನ್ಯ ನಿರ್ವಹಣಾ ಕಾರ್ಯಾಚರಣೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಬ್ರೇಕ್ ವೈಫಲ್ಯ ಉಂಟಾದ ಕಾರಣ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.
ಸದ್ಯ ಸ್ಥಳಕ್ಕೆ ದೌಡಾಯಿಸಿರುವ ರೈಲ್ವೆ ತಾಂತ್ರಿಕ ಸಿಬ್ಬಂದಿ ಹಳಿತಪ್ಪಿದ ಬೋಗಿಗಳನ್ನು ಹಳಿಗೆ ತರುವ ನಿಟ್ಟಿನಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ರೈಲಿನ ಮೂರು ಬೋಗಿಗಳನ್ನು ತೆರವುಗೊಳಿಸಲಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


