*ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ಕ್ಷಮೆ ಯಾಚಿಸಿದ ನಟ ರಣವೀರ್ ಸಿಂಗ್*

ಪ್ರಗತಿವಾಹಿನಿ ಸುದ್ದಿ: ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಾ ಚಾಮುಂಡಿ ದೇವಿ ದೈವದ ಬಗ್ಗೆ ಅಪಮಾನ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಸಾಲು ಸಾಲು ಸಂಕಷ್ಟ ಎದುರಾದ ಬೆನ್ನಲ್ಲೇ ಮೈಸೂರಿಗೆ ಆಗಮಿಸಿದ್ದು, ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದೇವಿಯ ಕ್ಷಮೆ ಕೋರಿದ್ದಾರೆ.
ಕೆಲ ದಿನಗಳ ಹಿಂದೆ ಕಾಂತಾರಾ ಸಿನಿಮಾದ ದೈವದ ಬಗ್ಗೆ ಅನುಕರಣೆ ಮಾಡುವ ನೆಪದಲ್ಲಿ ದೈವಕ್ಕೆ ಅಪಮಾನ ಮಾಡಿದ್ದರು ರಣವೀರ್ ಸಿಂಗ್. ರಣವೀರ್ ಸಿಂಗ್ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತಲ್ಲದೇ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ರಣವೀರ್ ಸಿಂಗ್ ಅವರಿಗೆ ಮಾಡಿದ ತಪ್ಪಿಗೆ ಕ್ಷಮೆ ಕೇಳುವಂತೆ ಹೈಕೋರ್ಟ್ ಸೂಚಿಸಿತ್ತು. ಚಾಮುಂಡಿ ಬೆಟ್ಟಕ್ಕೆ ಬಂದು ಕ್ಷಮೆ ಕೇಳುವುದಾಗಿ ರಣವೀರ್ ಸಿಂಗ್ ಹೇಳಿಕೆ ನೀಡಿದ್ದರು. ಇದೀಗ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡಿ ತಾಯಿಯ ಬಳಿ ಕ್ಷಮೆ ಕೇಳಿದ್ದಾರೆ.
ಗೋವಾನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ವದಲ್ಲಿ ಭಾಗವಹಿಸಿದ್ದ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಅವರನ್ನು ಮಾತನಾಡಿಸುವ ಸಂದರ್ಭದಲ್ಲಿ ಕಾಂತಾರಾ ಸಿನಿಮಾದ ದೈವದ ಬಗ್ಗೆ ಮಾತನಾಡುತ್ತಾ ದೈವವನ್ನು ಹೀಯಾಳಿಸಿ ಅನುಕರಣೆ ಮಾಡಿದ್ದರು. ರಣವೀರ್ ಸಿಂಗ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಬಗ್ಗೆ ಹೈಕೋರ್ಟ್ನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ರಣವೀರ್ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಚಾಮುಂಡಿ ದೇವಾಲಯದಲ್ಲಿ ಕ್ಷಮೆ ಕೇಳಬೇಕು ಎಂದು ಕೆಲ ವಾರಗಳ ಹಿಂದೆ ಸೂಚನೆ ನೀಡಿತ್ತು. ಆದರೆ ರಣವೀರ್ ಸಿಂಗ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ಇದೀಗ ದುರಂಧರ್-೨ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ಬಾಲಿವುಡ್ ನಿಂದ ರಣವೀರ್ ಸಿಂಗ್ ಬ್ಯಾನ್ ಆಗಿದ್ದಾರೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಏಕಾಏಕಿ ಹೊರನಡೆದಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ನಟನ ವಿರುದ್ಧ ಅಸಹಕಾರದ ಕಠಿಣ ನಿರ್ಧಾರ ಪ್ರಕಟಿಸಿದೆ. ರಣವೀರ್ ಸಿಂಗ್ ಹೊಸ ಚಿತ್ರಗಳ ಚಿತ್ರೀಕರಣ ಮಾಡದಂತೆ ಹಾಗೂ ಚಿತ್ರರಂಗದ ಯಾರೂ ಅವರೊಂದಿಗೆ ಕೆಲಸ ಮಾಡದಂತೆ ಸೂಚಿಸಿ ಬ್ಯಾನ್ ಮಾಡಿದೆ. ವೃತ್ತಿ ಜೀವನಕ್ಕೆ ಸಂಕಷ್ಟ ಎದುರಾದ ಬೆನ್ನಲ್ಲೇ ರಣವೀರ್ ಸಿಂಗ್ ಚಾಮುಂಡಿ ಬೆಟ್ಟಕ್ಕೆ ಓಡಿ ಬಂದಿದ್ದಾರೆ.
ಇಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿರುವ ರಣವೀರ್ ಸಿಂಗ್ ಚಾಮುಂಡಿ ದೇವಾಲಯದ ಗರ್ಭಗುಡಿಯಲ್ಲಿ ಕುಳಿತು ತಾಯಿಯ ಮುಂದೆ ಕ್ಷಮೆ ಯಾಚನೆ ಮಾಡಿದ್ದಾರೆ. ಅಲ್ಲದೆ, ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.



