*ಸಿದ್ದರಾಮಯ್ಯ ಹಳೆಯ ಹುಲಿ; ಯಾವಾಗ ಯಾವ ಆಟ ಆಡುತ್ತಾರೆಂದು ಊಹಿಸಲು ಸಾಧ್ಯವಿಲ್ಲ ಎಂದ ಶೋಭ ಕರಂದ್ಲಾಜೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಮುಂದಾಗಿದ್ದು, ನಾಳೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಯಾವುದೂ ಖಚಿತತೆ ಇಲ್ಲ ಎಂದಿದ್ದಾರೆ.
ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಯಾವುದೂ ಗ್ಯಾರಂಟಿ ಅಲ್ಲ, ಏಕೆಂದರೆ ಅವರು ಹಳೆಯ ಹುಲಿ. ಯಾವಾಗ ಯಾವ ಆಟ ಆಡುತ್ತಾರೆಂದು ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಆಡಳಿತದಲ್ಲಿ ಎರಡುವರೆ ವರ್ಷ ಕೇವಲ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಚರ್ಚೆ ನಡೆಸಿದೆ. ಬರಗಾಲ, ನೆರೆಹಾವಳಿ, ಬೆಂಗಳೂರಿನಲ್ಲಿ ತ್ಯಾಜ್ಯ ಹಗರಣದಂತಹ ಗಂಭೀರ ಸಮಸ್ಯೆಗಳಿದ್ದರೂ, ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡದಿರುವುದು, ಇಲಾಖೆಗಳು ಕೆಲಸ ಮಾಡದಿರುವುದು ಮತ್ತು ಇಲಾಖೆಗಳಿಗೆ ಹಣಕಾಸಿನ ಕೊರತೆ ಇರುವುದು ರಾಜ್ಯದ ದುಸ್ಥಿತಿಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಕುರ್ಚಿ ಹೋರಾಟವನ್ನು ನಿಲ್ಲಿಸಿ, ಜನರ ಸಮಸ್ಯೆಗಳ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.




