CrimeKannada NewsKarnataka NewsLatest

*ಏಳು ಮಂದಿಯ ಹತ್ಯೆ ಹಿಂದೆ ಒಂಬತ್ತು ಜನರ ಟಾರ್ಗೆಟ್!*: *ಕನ್ನಡದ ಮೆಸೇಜ್‌ನಿಂದಲೇ ಸಿಕ್ಕಿಬಿದ್ದ ಹಂತಕ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಆರಂಭದಲ್ಲಿ ಏಳು ಮಂದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿ ಇಂದು ಶೇಖರ್‌, ವಾಸ್ತವವಾಗಿ ಒಂಬತ್ತು ಮಂದಿಯನ್ನು ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ, ಕೊಲೆ ಬಳಿಕ ಕನ್ನಡದಲ್ಲಿ ಕಳುಹಿಸಿದ್ದ ಸಂದೇಶಗಳೇ ಆತನ ಮೇಲೆ ಅನುಮಾನ ಮೂಡಿಸಲು ಪ್ರಮುಖ ಕಾರಣವಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಕ್ಟೋಬರ್ 16ರಿಂದ ಒಂದೊಂದಾಗಿ ಹತ್ಯೆ ನಡೆಸಿದ್ದ ಆರೋಪಿ, ಸುಮಾರು 15 ದಿನಗಳ ಅವಧಿಯಲ್ಲಿ ಏಳು ಮಂದಿಯನ್ನು ಕೊಂದಿದ್ದಾನೆ. ಅಕ್ಟೋಬರ್ 31ರಂದು ತಂಗಿ ಸುನಿತಾ ಮನೆಗೆ ಊಟಕ್ಕೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿ, ಶಂಕರ್ ತನ್ನ ಪತ್ನಿ ನಳಿನಿ ಮತ್ತು ಮಗನೊಂದಿಗೆ ತೆರಳಿದ್ದರು. ನಳಿನಿ ಕೂಡ ಪೋಷಕರಿಗೆ ಇದೇ ವಿಚಾರ ತಿಳಿಸಿದ್ದಳು. ಆದರೆ ಎರಡು ದಿನ ಕಳೆದರೂ ಕುಟುಂಬ ವಾಪಸಾಗದಿದ್ದರಿಂದ ಅನುಮಾನ ಶುರುವಾಯಿತು.

ಈ ನಡುವೆ ಶಂಕರ್ ಮತ್ತು ನಳಿನಿ ಅವರ ಮೊಬೈಲ್‌ಗಳಿಂದ ಸ್ನೇಹಿತರು ಹಾಗೂ ಕುಟುಂಬದವರಿಗೆ ಸಂದೇಶಗಳು ಬಂದಿದ್ದವು. ಉತ್ತರ ಭಾರತ ಪ್ರವಾಸದಲ್ಲಿದ್ದೇವೆ, ಮೊಬೈಲ್ ಅಧಿಕಾರಿಗಳ ಬಳಿ ಇದೆ, ನೆಟ್‌ವರ್ಕ್ ಸಮಸ್ಯೆಯಿಂದ ಕರೆ ಮಾಡಬೇಡಿ ಎಂಬ ಸಂದೇಶ ಕಳುಹಿಸಲಾಗಿತ್ತು. ಮಗನ ಧ್ವನಿಯಲ್ಲಿ ವಾಯ್ಸ್ ನೋಟ್ ಕೂಡ ಬಂದಿತ್ತು.

ಆದರೆ ಶಂಕರ್‌ಗೆ ಕನ್ನಡದಲ್ಲಿ ಸರಾಗವಾಗಿ ಟೈಪ್ ಮಾಡಲು ಬರುತ್ತಿರಲಿಲ್ಲ ಎಂಬುದು ಸ್ನೇಹಿತರಿಗೆ ತಿಳಿದಿತ್ತು. ಹೀಗಾಗಿ ಸಂದೇಶಗಳ ಬಗ್ಗೆ ಅನುಮಾನಗೊಂಡ ಅವರು ನಳಿನಿಯ ಪೋಷಕರನ್ನು ವಿಚಾರಿಸಿದ್ದಾರೆ. ಅಲ್ಲಿಯೂ ಇದೇ ರೀತಿಯ ಸಂದೇಶಗಳು ಬಂದಿರುವುದು ಗೊತ್ತಾಗಿದೆ. ಬಳಿಕ ನಳಿನಿಯ ತಾಯಿ ನವೆಂಬರ್ 2ರಂದು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಮಗಳು, ಅಳಿಯ ಮತ್ತು 11 ವರ್ಷದ ಮೊಮ್ಮಗ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಏಳು ಮಂದಿಯಲ್ಲ, ಒಂಬತ್ತು ಜನರ ಹತ್ಯೆಗೆ ಸಂಚು?

ಆರೋಪಿ ಇಂದು ಶೇಖರ್‌ ಆರಂಭದಲ್ಲಿ ಒಂಬತ್ತು ಮಂದಿಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಆತನ ಪ್ರಯತ್ನ ವಿಫಲವಾಗಿದೆ. ಶಂಕರ್ ದಂಪತಿಯ 11 ವರ್ಷದ ಮಗನನ್ನು ಮೂರು ದಿನಗಳ ಕಾಲ ತನ್ನ ವಶದಲ್ಲಿಟ್ಟುಕೊಂಡಿದ್ದರು ಕೊಲೆ ಮಾಡಿರಲಿಲ್ಲ. ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿರುವುದು ತಿಳಿದ ಬಳಿಕ ತನ್ನ ನಿರ್ಧಾರ ಬದಲಿಸಿದ್ದಾನೆಯೇ.

ಸೇಲಂ ಕಾಡಿನಲ್ಲಿ ಪತ್ತೆಯಾದ ಎರಡು ಶವಗಳ ಗುರುತು

ಇನ್ನೊಂದೆಡೆ, ತಮಿಳುನಾಡಿನ ಸೇಲಂ ಜಿಲ್ಲೆಯ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಎರಡು ಮೃತದೇಹಗಳ ಗುರುತನ್ನು ಆರೋಪಿ ಇಂದುಶೇಖರ್ ಪತ್ತೆಹಚ್ಚಿದ್ದಾನೆ. ಅವು ತನ್ನ ಪತ್ನಿ ಸುನಿತಾ ಮತ್ತು ಅತ್ತೆ ರೂಪವತಿ ಅವರ ಮೃತದೇಹಗಳು ಎಂದು ಗುರುತಿಸಿದ್ದಾನೆ.

ಮಧ್ಯರಾತ್ರಿ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಮೃತದೇಹಗಳನ್ನು ಗುರುತಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ಮೃತದೇಹಗಳ ಹಸ್ತಾಂತರ ಪ್ರಕ್ರಿಯೆ ನಡೆಯಬೇಕಿದೆ. ಅಂತ್ಯಕ್ರಿಯೆಯನ್ನು ಸೇಲಂನಲ್ಲೇ ನಡೆಸಬೇಕೇ ಅಥವಾ ಬೆಂಗಳೂರಿಗೆ ಮೃತದೇಹಗಳನ್ನು ತರಬೇಕೇ ಎಂಬ ಬಗ್ಗೆ ಕುಟುಂಬಸ್ಥರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಚಿನ್ನಾಭರಣ ದೋಚಿ ಪ್ರಯಾಣಕ್ಕೆ ಹಣ ಬಳಕೆ?

ಹತ್ಯೆಗಳ ಬಳಿಕ ಆರೋಪಿ ಮೃತರ ಚಿನ್ನಾಭರಣಗಳನ್ನು ದೋಚಿದ್ದಾನೆ. ರಕ್ತದ ಕಲೆಗಳಿದ್ದ ಸರ, ಕಿವಿಯೋಲೆ ಮತ್ತು ಉಂಗುರ ಸೇರಿದಂತೆ ಕೆಲವು ಒಡವೆಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿದ್ದಾನೆ. ಕೆಲವು ಆಭರಣಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಖರ್ಚು ಮಾಡಿದ್ದಾನೆ.

ಉಳಿದ ಆಭರಣಗಳನ್ನು ಗಿರವಿ ಇಟ್ಟು, ಆ ಹಣದಿಂದ ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡು ಬೆಂಗಳೂರು, ಮಂಗಳೂರು, ಚೆನ್ನೈ ಮತ್ತು ನಂದಿಬೆಟ್ಟದ ಕಡೆಗೆ ಪ್ರಯಾಣಿಸಿದ್ದಾನೆ. ಜೊತೆಗೆ ಮಗಳಿಗೆ ಕೆಲವು ಒಡವೆಗಳನ್ನು ನೀಡಿದ್ದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಂದೆ ಹೇಳಿದ ಕೆಲಸ ಮಾಡುತ್ತಿದ್ದೆ ಎಂದು ಅಪ್ರಾಪ್ತ ಮಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಇನ್ನೂ ನಾಲ್ವರ ಮೃತದೇಹಗಳಿಗಾಗಿ ಹುಡುಕಾಟ

ಈ ಪ್ರಕರಣದಲ್ಲಿ ಏಳು ಮಂದಿಯ ಹತ್ಯೆಯಾಗಿದ್ದು, ಈವರೆಗೆ ಕೆಲವು ಮೃತದೇಹಗಳು ಪತ್ತೆಯಾಗಿವೆ. ನಂದಿಬೆಟ್ಟದಲ್ಲಿ ಏಳು ವರ್ಷದ ಬಾಲಕ ಮತ್ತು ಶಂಕರ್ ಪುತ್ರ ಪುನೀತ್‌ನ ಮೃತದೇಹಗಳು ಪತ್ತೆಯಾಗಿದ್ದವು. ತಮಿಳುನಾಡಿನ ಎರ್ಕಾಡ್ ಅರಣ್ಯ ಪ್ರದೇಶದಲ್ಲೂ ಎರಡು ಮೃತದೇಹಗಳು ಪತ್ತೆಯಾಗಿವೆ. ಉಳಿದ ಮೃತದೇಹಗಳ ಪತ್ತೆ ಮತ್ತು ಗುರುತಿಸುವ ಕಾರ್ಯ ಮುಂದುವರಿದಿದೆ.

ಒಟ್ಟಿನಲ್ಲಿ, ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಒಂಬತ್ತು ಜನರ ಹತ್ಯೆಗೆ ಸಂಚು, ಕನ್ನಡದಲ್ಲಿ ಕಳುಹಿಸಿದ ಸಂದೇಶಗಳು ಮತ್ತು ಚಿನ್ನಾಭರಣ ದೋಚಿದ ಆರೋಪ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಈ ಭೀಕರ ಪ್ರಕರಣದ ಇನ್ನಷ್ಟು ಸಂಗತಿಗಳು ಪೊಲೀಸರ ಮುಂದಿನ ತನಿಖೆಯಲ್ಲಿ ಹೊರಬರಬೇಕಿದೆ.

Related Articles

Back to top button